17 November 2008

"ಅಪ್ರಿಯದರ್ಶಿನಿ" - ಇಂದಿರಾಗಾಂಧಿ



ಇಂದು ಇಂದಿರಾ ಗಾಂಧಿಯವರ ಪುಣ್ಯತಿಥಿ.  ಹಂತಕರ ಗುಂಡೇಟುಗಳಿಗೆ ಅವರು ಬಲಿಯಾಗಿ 24 ವರ್ಷಗಳಾದವು.  ಅವರ ಕೆಟ್ಟ ರಾಜಕೀಯ, ಒಡೆದಾಳುವ ರಾಜಕೀಯನೀತಿ ಅವರನ್ನೇ ಆಹುತಿ ತೆಗೆದುಕೊಂಡಿತು.    ನಾನು ದೆಹಲಿಗೆ ಹೋದಾಗಲೆಲ್ಲಾ ರಾಜಘಾಟ್ ನೋಡುವಂತೆಯೇ, ಇಂದಿರಾ ಗಾಂಧಿಯವರ ಸಮಾಧಿ "ಶಕ್ತಿಸ್ಥಳ"ವನ್ನೂ , ಸ್ಮಾರಕವಾಗಿರುವ ಅವರ ನಿವಾಸವನ್ನೂ ನೋಡುತ್ತೇನೆ.  ಅಪಾರ ಜನಪ್ರಿಯತೆ, ಖ್ಯಾತಿ ಪಡೆದ ಅವರಿಗೆ ಈ ದೇಶಕ್ಕೆ ಏನಾದರೂ ಮಾಡಬೇಕು ಎಂದು ಅನ್ನಿಸಲಿಲ್ಲವೇಕೆ, ಎಂಬುದು ತುಂಬಾ ಕಾಡುತ್ತದೆ.   ಕೋಟಿ ಕೋಟಿ ಮತಹಾಕಿ ಬೆಂಬಲಿಸಿದ ಜನರ ವಿಶ್ವಾಸ - ಪ್ರೀತಿಗಳ ಋಣವನ್ನು ತೀರಿಸಬೇಕಿತ್ತು ಎಂದು ಅವರಿಗೆ ಏಕೆ ಅನ್ನಿಸಲಿಲ್ಲ ಎಂದು ವ್ಯಥೆಯಾಗುತ್ತದೆ. 


ಕೆಲವು ಉಪಚುನಾವಣೆಗಳು ಅಪೂರ್ವ ಮಹತ್ವ ಪಡೆಯುತ್ತವೆ.  1978ರ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯು ದೇಶಾದ್ಯಂತ ರಾಜಕೀಯ ಪಲ್ಲಟವನ್ನೇ ಮಾಡಿದಂತಹ ಅಂತಹ ಮಹತ್ವದ ಚುನಾವಣೆ.  ಉತ್ತರಪ್ರದೇಶದ ತಮ್ಮ ಪರಂಪರಾಗತ ಲೋಕಸಭಾ ಕ್ಷೇತ್ರ ರಾಯಬರೇಲಿಯಲ್ಲಿ ಇಂದಿರಾ ಸೋತುಹೋಗಿದ್ದರು.  ಅಷ್ಟೇಕೆ, ದೇಶವೇ ಅವರಿಗೆ ತಿರುಗಿಬಿದ್ದಿತ್ತು.  ಅವರು ಸೋತುದು ಒಬ್ಬ ತಲೆತಿರುಕ, ವಿದೂಷಕ ಎನ್ನಬಹುದಾದ ರಾಜನಾರಾಯಣ್ ಎದುರು.  ಅದು ರಾಜನಾರಾಯಣ್ ಪರವಾದ ಮತದಾರರ ತೀರ್ಪು ಎನ್ನುವುದಕ್ಕಿಂತ, ಇಂದಿರಾ ವಿರುದ್ಧವಾದ ಪ್ರತಿಭಟನೆಯ, ಸಿಟ್ಟಿನ ಸಂಕೇತವಾಗಿತ್ತು.  ಆದರೇನು ?  ತುರ್ತಾಗಿ ಲೋಕಸಭೆಗೆ ಹೇಗಾದರೂ ಮಾಡಿ ಅವರು ಪ್ರವೇಶಿಸಬೇಕಾಗಿತ್ತು.  ಅಧಿಕಾರವಿಲ್ಲದೆ, ಎಂ.ಪಿ. ಸಹ ಅಲ್ಲ ಎನ್ನುವಂತಹ ದುಸ್ಥಿತಿಯಲ್ಲಿದ್ದ  ಇಂದಿರಾ ಚಡಪಡಿಸುತ್ತಿದ್ದರು.  1977ರ ಮಹಾಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಹಿಂದೀ ಹೃದಯಭೂಮಿಯಲ್ಲಿ ನಿರ್ನಾಮವಾಗಿದ್ದರೂ, ಕರ್ನಾಟಕ - ಆಂಧ್ರಗಳಲ್ಲಿ ಜಯಭೇರಿ ಬಾರಿಸಿತ್ತು.  ಇರುವ ಒಬ್ಬ ಎಂ.ಪಿ. ಕೈಯಲ್ಲೇ ರಾಜೀನಾಮೆ ಕೊಡಿಸಿ ಆ ಕ್ಷೇತ್ರದ ಉಪಚುನಾವಣೆಯಲ್ಲಿ ಇಂದಿರಾರನ್ನು ಲೋಕಸಭೆಗೆ ಹೇಗಾದರೂ ಕಳುಹಿಸುವ ಹುನ್ನಾರ ನಡೆದಿತ್ತು. 


ಆಗ ದಿಢೀರ್ ಪ್ರಚಾರಕ್ಕೆ ಬಂದಿದ್ದು ನಮ್ಮ ಚಿಕ್ಕಮಗಳೂರು ಕ್ಷೇತ್ರ.  1952ರ ಕಾಲದಿಂದಲೂ ಕಾಂಗ್ರೆಸ್ ಅಭ್ಯರ್ಥಿ ಆಗಿ ನಿಂತ "ಎಂತಹವರನ್ನೂ"  ಬೆಂಬಲಿಸಿದ  "ಖ್ಯಾತಿ" ಈ ಕ್ಷೇತ್ರದ್ದು.  ಚಿಕ್ಕಮಗಳೂರು ಸಂಸದ ಡಿ.ಬಿ.ಚಂದ್ರೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿರಾರಿಗೆ ರತ್ನಗಂಬಳಿ ಹಾಸಿದರು.  ಅಂದಿನಿಂದಲೇ ಪ್ರಾರಂಭವಾಯಿತು ನೋಡಿ ;  ಚಿಕ್ಕಮಗಳೂರು ಕ್ಷೇತ್ರಕ್ಕೆ ಭೇಟಿ ನೀಡದ ಪತ್ರಕರ್ತರಿಲ್ಲ,  ನಾಯಕರಿಲ್ಲ.  ರಾಷ್ಟ್ರೀಯ - ಅಂತರರಾಷ್ಟ್ರೀಯ ಮಹತ್ವ ಬಂದುಬಿಟ್ಟಿತು, ಈ ಕ್ಷೇತ್ರಕ್ಕೆ ಇದ್ದಕ್ಕಿದ್ದಂತೆ.   ಆಗ ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.  ಬೇರೆಲ್ಲೆಡೆ ಸೋತ ಕಾಂಗ್ರೆಸ್,  ಕರ್ನಾಟಕದಲ್ಲಿ ಜಯಭೇರಿ ಬಾರಿಸಿದ್ದು ತಮ್ಮಿಂದಲೇ ಎಂದುಕೊಂಡುಬಿಟ್ಟರು ಅರಸು.  ಅವರು ಪೊಗರು - ಹೆಮ್ಮೆಗಳು,  ದುರಹಂಕಾರ - ಅಟ್ಟಹಾಸಗಳಾಗಿ ಮಾರ್ಪಟ್ಟವು.  ಆವರೇ, ಆ ಉಪಚುನಾವಣೆಯ ಹೊಣೆ ಹೊತ್ತುಕೊಂಡಿದ್ದರು.  ಎದುರಾಳಿ ವೀರೇಂದ್ರ ಪಾಟೀಲರು ಜನತಾ ಪಕ್ಷದ ಅಭ್ಯರ್ಥಿ.  ಆತ ಸಂಭಾವಿತ ರಾಜಕಾರಣಿ ಮತ್ತು ಮುಖ್ಯಮಂತ್ರಿ ಆಗಿ ಉತ್ತಮ ಆಡಳಿತ ನೀಡಿ ಮೆಚ್ಚುಗೆ ಗಳಿಸಿದ್ದರು.  ಸಮಾಜವಾದಿಯಾಗಿ, ಕಾರ್ಮಿಕರ - ಬಡವರ ಪರವಾದ ಹೋರಾಟ ನಡೆಸುತ್ತಿದ್ದ ಜಾರ್ಜ್ ಫರ್ನಾಂಡಿಸ್,  ಜನತಾ ಪಕ್ಷದ ಪರವಾಗಿ ಈ ಉಪಚುನಾವಣೆಯ ಹೊಣೆ ಹೊತ್ತಿದ್ದರು.  ಜಾರ್ಜ್ ಅವರ ಪರಿಶ್ರಮ - ಓಡಾಟ- ಕಳಕಳಿ ನೋಡಿ ನಮ್ಮಂತಹವರಿಗೆ ಕುತೂಹಲ, ಸಂಭ್ರಮ - ಮೆಚ್ಚುಗೆ. 

ಒಂದು ದಿನ ನಾನು ಬ್ಯಾಂಕಿನ ಕೆಲಸದ ಭರಾಟೆಯ ನಡುವೆ, ಒತ್ತಡದ ಶ್ರಮಲೋಕದಲ್ಲಿ ಮುಳುಗಿದ್ದಾಗ, ನಮ್ಮ ಅಟೆಂಡರ್ ಕೂಗಿದ.  "ಸಾರ್, ಸಾರ್, ಇಂದ್ರಾಗಾಂಧಿ ಬತ್ತಾ ಅವ್ಳೆ.....  ಬನ್ನಿ,  ಬನ್ನಿ...." .    ಸರಿ, ನಾವೆಲ್ಲಾ ಎದ್ದೆವೋ ಬಿದ್ದೆವೋ ಎನ್ನುತ್ತಾ  ಬ್ಯಾಂಕಿನ ಹೊರಬಾಗಿಲ ಬಳಿ ಧಾವಿಸಿದೆವು.  ಎದುರಿಗಿದ್ದ ದೃಶ್ಯ ನೋಡಿ, ನಾವೆಲ್ಲ ಅಕ್ಷರಶಃ ಮಾತಿಲ್ಲದಂತೆ ಮೂಕರಾಗಿಹೋದೆವು.  ಚುನಾವಣಾ ಪ್ರಚಾರದ ಒಂದು ಕಾರು,  ಅಲ್ಲಿ ಇಂದಿರಾ ಗಾಂಧಿಯವರು ನಿಂತು ಎಲ್ಲರ ಕಡೆ, ಕೈಮುಗಿಯುತ್ತಿದ್ದರು,  ಕೈ ಬೀಸುತ್ತಿದ್ದರು.  ಇಪ್ಪತ್ತು - ಇಪ್ಪತ್ತೈದು ಜನ ಮಕ್ಕಳು ಹೋ ಎಂದು ಅಸಂಬದ್ಧವಾಗಿ ಕೇಕೆ ಹಾಕುತ್ತಿದ್ದವು.  ತುಂಬ ಚಿಕ್ಕ ಊರಾದ ನಮ್ಮ ಅಜ್ಜಂಪುರದ  "ಮಹಾನ್" ನಾಯಕರೂ ಸಹ ಇಂದಿರಾ ಅವರ ಜೊತೆಗಿರಲಿಲ್ಲ.  ಮೆರವಣಿಗೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸರೂ ಕಾಣಲಿಲ್ಲ.  ಹಿರಿಯರು, ನಾಯಕರು, ಮಹಿಳೆಯರು, ಯಾರೂ ಜೊತೆಗಿರಲಿಲ್ಲ.  ಅಕ್ಷರಶಃ ಇಂದಿರಾ ಪಾತಾಳಕ್ಕೆ ಇಳಿದುಬಿಟ್ಟಿದ್ದರು, ಏಕಾಂಗಿಯಾಗಿಬಿಟ್ಟಿದ್ದರು. 

ನನ್ನ ಕಣ್ಮುಂದೆ ಕ್ಷಣಾರ್ಧದಲ್ಲಿ ಚರಿತ್ರೆಯ ಪುಟಗಳು ಪಟಪಟನೆ ಹಾರಾಡಿದವು.  ಇಂದಿರಾರ ತಾತ ಮೋತೀಲಾಲ್ ನೆಹರೂ ಭಾರೀ ಶ್ರೀಮಂತ.  ಆಂತಹ ಶ್ರೀಮಂತಿಕೆಯನ್ನು ನಮ್ಮಂತಹವರು ಪುಸ್ತಕದಲ್ಲಿ ಓದಿ, ಸಿನೆಮಾದಲ್ಲಿ ನೋಡಿ ಕಲ್ಪಿಸಿಕೊಳ್ಳಬಹುದು ಅಷ್ಟೇ !  ಅಲಹಾಬಾದ್‌ನಲ್ಲಿರುವ ಆನಂದಭವನದ ವಿಶಾಲ ಆವರಣದಲ್ಲಿ ನೇಕಾರರು, ಬಣ್ಣಹಾಕುವವರು, ವಿನ್ಯಾಸ ಸಿದ್ಧಪಡಿಸುವವರು, ದರ್ಜಿಗಳು ತಿಂಗಳುಗಟ್ಟಲೆ ಇದ್ದುಕೊಂಡು ಮನೆಮಂದಿಯ ಆಸಕ್ತಿ - ಆಯ್ಕೆಗಳಿಗೆ ಅನುಗುಣವಾಗಿ ಬಟ್ಟೆಬರೆ - ವೇಷಭೂಷಣ, ಸಿದ್ಧಪಡಿಸುತ್ತಿದ್ದರಂತೆ.  ನೆಹರೂ ಮನೆಯವರು ಬಟ್ಟೆ ಖರೀದಿಗೆ ಅಂಗಡಿಗಳಿಗೆ ಎಂದೂ ಹೋದವರಲ್ಲ.  ಕಮಲಾ ನೆಹರೂ - ಇಂದಿರಾ ಮುಂತಾದ ಹೆಣ್ಣುಮಕ್ಕಳು ಯಾರೂ ರಸ್ತೆಗಳಲ್ಲಿಯೇ ನಡೆದವರಲ್ಲ.  ಅವರಿಗಾಗಿ ಸದಾ ಮೇನೆಗಳು ಸಿದ್ಧವಾಗಿರುತ್ತಿದ್ದವು.  ಬೇಸಿಗೆಯಲ್ಲಿ ಅವರ ಕುಟುಂಬ ನೈನಿತಾಲ್ - ಶಿಮ್ಲಾಗಳಂತಹ ಗಿರಿಧಾಮಗಳಲ್ಲಿ ತಿಂಗಳುಗಟ್ಟಲೆ ಇರುತ್ತಿತ್ತು.  ಇಂದಿರಾ ಅವರ ಅಜ್ಜಿ ಸ್ವರೂಪರಾಣಿಯವರು "ಪ್ರತಿವರ್ಷ ಹೋಗುವ ಈ ಗಿರಿಧಾಮಗಳಲ್ಲೆಲ್ಲಾ ಒಂದೊಂದು ಬಂಗಲೆಯನ್ನೇ ಕಟ್ಟಿಸಿಬಿಟ್ಟರೆ ಅನುಕೂಲವಾಗುತ್ತದೆ, ಬಾಡಿಗೆ ಮನೆಗಳಲ್ಲಿ - ಹೋಟೇಲುಗಳಲ್ಲಿ ಅಷ್ಟೊಂದು ಅನುಕೂಲವಿರುವುದಿಲ್ಲ", ಎಂದು ಆಕ್ಷೇಪಿಸುತ್ತಿದ್ದರಂತೆ, ಪತಿ ಮೋತೀಲಾಲರನ್ನು.  ಅವರೆಲ್ಲಾ ಇದ್ದುದೇ ಹಾಗೆ.  ರಾಜಮಹಾರಾಜರ ವಿಲಾಸ, ಶ್ರೀಮಂತಿಕೆ.    ಗಾಂಧೀಜಿ ಜೊತೆ ಸೇರಿ  "ಸೇಫ್, ಸೆಕ್ಯೂರ್ಡ್" ಎನ್ನುವಂತಹ ಅಹಿಂಸಾತ್ಮಕ ಹೋರಾಟ ನಡೆಸಿ ಜೈಲಿಗೆ ಹೋದ ತಂದೆ - ಮಗ,  ಮೋತೀಲಾಲ್ - ಜವಾಹರಲಾಲರು ಸೆರೆಮನೆಯಲ್ಲೂ ರಾಜರಂತೆಯೇ ಇದ್ದರು.  ಶ್ರೀಮಂತರನ್ನು ಅಧಿಕಾರ, ಪ್ರಸಿದ್ಧಿಗಳು ಹುಡುಕಿಕೊಂಡೇ ಬರುತ್ತವೆಯೇನೋ.  ಜವಾಹರಲಾಲರು "ಮಗಳಿಗೆ ಬರೆದ ಪತ್ರಗಳೂ"  ಪ್ರಸಿದ್ಧಿ ಪಡೆದವು.  ಜವಾಹರಲಾಲರ ಅಘೋಷಿತ ಉತ್ತರಾಧಿಕಾರಿಯಾಗಿ ಇಂದಿರಾ ತಮ್ಮ ನಲವತ್ತನೇ ವಯಸ್ಸಿಗೇ,  ಅಂದಿನ ಅವಿಭಜಿತ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆ ವಹಿಸಿಕೊಂಡಿದ್ದರು.  ತಮ್ಮ ಸರ್ವಾಧಿಕಾರಿ ಧೋರಣೆ, ಕಪಿಮುಷ್ಠಿಗಳಂತೆಯೇ  ತಮ್ಮ ಸೌಂದರ್ಯ - ಗತ್ತು -ಗಾಂಭೀರ್ಯ -ವಿಶಿಷ್ಟಶೈಲಿಗಳಿಂದಲೂ ಇಂದಿರಾ ಹೆಸರು ಮಾಡಿದ್ದರು. 

1971ರ ಬಾಂಗ್ಲಾ ವಿಜಯದ ನಂತರ ಪ್ರಧಾನಿ ಇಂದಿರಾ ಪ್ರಸಿದ್ಧಿಯ ಪರಾಕಾಷ್ಠೆ ತಲುಪಿದ್ದರು.  ಆದರೆ ಭ್ರಷ್ಟಾಚಾರ - ನಿರುದ್ಯೋಗ - ಬೆಲೆಯುಬ್ಬರಗಳನ್ನು ನಿಯಂತ್ರಿಸಲು ವಿಫಲರಾಗಿದ್ದರು.  1975ರಲ್ಲಿ, ತುರ್ತುಪರಿಸ್ಥಿತಿ ಹೇರಿ ಎಲ್ಲ ಬಗೆಯ ಸ್ವಾತಂತ್ರ್ಯಗಳನ್ನು ಹತ್ತಿಕ್ಕಿದರು.  20ಅಂಶಗಳ ಕಾರ್ಯಕ್ರಮ - ಸಂಜಯಗಾಂಧಿಯವರ 5 ಅಂಶಗಳ ಕಾರ್ಯಕ್ರಮಗಳನ್ನು ಹೇರಿ,  ಆಡಳಿತ ವ್ಯವಸ್ಥೆಯನ್ನು ತೊತ್ತಿಗಿಂತ ಕಡೆ ಎನ್ನುವಂತೆ ಮಾಡಿಬಿಟ್ಟಿದ್ದರು.  ಕಾರ್ಮಿಕರ ಹಕ್ಕುಗಳು ಮಣ್ಣು ಪಾಲಾಗಿದ್ದವು.  ಮಹಾತ್ಮಾ ಗಾಂಧಿಯವರ ಹೆಸರು ಹೇಳಿಕೊಂಡು ಅಧಿಕಾರ ಕಬಳಿಸಿದ ಕಾಂಗ್ರೆಸ್ ಪಕ್ಷವು,  ಭಟ್ಟಂಗಿಗಳ - ಗುಲಾಮರ ಸಂತೆಯಾಗಿಹೋಗಿತ್ತು.  ದೇವಕಾಂತ ಬರುವಾ ಎಂಬ ಓರ್ವ ಕಾಂಗ್ರೆಸ್ ಅಧ್ಯಕ್ಷನಂತೂ "ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ" ಎಂದು ಹೇಳಿ ಭಟ್ಟಂಗಿತನದ ಪರಾಕಾಷ್ಠೆ ಎಂದರೆ ಏನು ಎನ್ನುವುದನ್ನು ತೋರಿಸಿದ್ದ.  ಕೇಂದ್ರದ ಮಂತ್ರಿ - ಸಂಸದರನ್ನು ಇಂದಿರಾ ಬರಿಯ ಬೆರಳ ಸನ್ನೆಯಿಂದ ನಿರ್ದೇಶಿಸುತ್ತಿದ್ದರು - ನಿಯಂತ್ರಿಸುತ್ತಿದ್ದರು. 

ತುರ್ತುಪರಿಸ್ಥಿತಿಯ ಅಕೃತ್ಯಗಳು - ದುಷ್ಕೃತ್ಯಗಳು ಮಿತಿ ಮೀರಿ,  1977ರ ಮಹಾಚುನಾವಣೆಗಳಲ್ಲಿ  ಇಂದಿರಾ ನೆಲ ಕಚ್ಚಿದ್ದರು.  ಒಮ್ಮೆ ಬೆಂಗಳೂರಿನಿಂದ ದೆಹಲಿಗೆ ಅವರು ಪಯಣಿಸಿದಾಗ ಅಲ್ಲಿ ದೆಹಲಿಯ ವಿಮಾನನಿಲ್ದಾಣದಲ್ಲಿ,   ಸ್ವಾಗತಕ್ಕೆ ಯಾರೂ ಇರಲಿಲ್ಲ.   ಕಾರಿರಲಿ, DTC [ಸಿಟಿ] ಬಸ್ಸಿನವನೂ ನಿಲ್ಲಿಸದೆ ಹಾಗೇಹೋಗಿದ್ದ.  ಬಸ್ ನಿಲ್ದಾಣದಲ್ಲಿ ಇಂದಿರಾ ವಾಸ್ತವವಾಗಿ  ಒಬ್ಬರೇ ನಿಂತಿದ್ದರೆಂದು, " ಹಿಂದು"  ಪತ್ರಿಕೆಯಲ್ಲಿ ಓದಿ ನಾವೆಲ್ಲಾ ಚಕಿತರಾಗಿಹೋಗಿದ್ದೆವು.  ಅದೇ ಇಂದಿರಾ ನಮ್ಮೂರಿನಲ್ಲಿ ನನ್ನ ಕಣ್ಣೆದುರು ಅದೇ ಸ್ಥಿತಿಯಲ್ಲಿ ಕಾಣಿಸಿದರು.  ಹಿಂಬಾಲಕರಿಲ್ಲ, ಗುಲಾಮರಿಲ್ಲ, ಭಟ್ಟಂಗಿಗಳಿಲ್ಲ.  ಸುತ್ತ ನೋಡಿ ಅವರು ಕೈಬೀಸುತ್ತಿದ್ದಾಗ ಪ್ರತಿಯಾಗಿ ಕೈಬೀಸುವವರೂ ಇರಲಿಲ್ಲ.  ಬರೀ ಚಿಳ್ಳೆ ಪಿಳ್ಳೆ ಹುಡುಗರ ಧಾಂಧಲೆ ಮಾತ್ರ.  ಇಂದಿರಾ ಅವರ ಆಡಳಿತವನ್ನು,  ತೀರ್ಮಾನಗಳನ್ನು, ಕಾರ್ಯನೀತಿಗಳನ್ನು ತಾತ್ತ್ವಿಕವಾಗಿ ವಿರೋಧಿಸುತ್ತಿದ್ದ ನನ್ನಂತಹವರಿಗೂ ಕಸಿವಿಸಿ ಆಗುವಂತಹ ದುರ್ಧರ ಸನ್ನಿವೇಶ ಅಲ್ಲಿ ಕಂಡಿತು.  ಬಡವರ ಪರವಾಗಿ ಹಿಂದುಳಿದವರ ಪರವಾಗಿ ಮಹಿಳೆಯರ ಪರವಾಗಿ,  ನೈಜ ಕಳಕಳಿಗಿಂತ ಗಿಮಿಕ್ಸ್ - ಸ್ಟಂಟ್ಸ್ ಮಾಡುತ್ತಿದ್ದ ಇಂದಿರಾ ಇದೀಗ ಪ್ರತಿಫಲ ಪಡೆದಂತೆ ಕಾಣುತ್ತಿತ್ತು. 

ಇಂದಿರಾ ಅವರ ಪೂರ್ಣ ಹೆಸರು "ಇಂದಿರಾ ಪ್ರಿಯದರ್ಶಿನಿ" ಎಂದು, ಅವರ ಇತಿಹಾಸ,  ಅವರ ಜೀವನದ ಚಿತ್ರಗಳ ವಿಶ್ಲೇಷಣೆ ಮಾಡಿದಾಗ ಅವರು "ಅಪ್ರಿಯದರ್ಶಿನಿ"ಯಾಗಿಯೇ ಕಾಣುತ್ತಾರೆ. 

11 September 2008

ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು


ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು -
ಪ್ರಭುತ್ವ (STATE) ಎಂಬುದು ಪ್ರಧಾನವಾಗಿ ರಾಜಕಾರಣ ಆಧಾರಿತವಾದುದು :
---------------------------------------------------------------------

ಅಮೆರಿಕಾ (USA) ದಲ್ಲಿ ಚೀನಾ ದೇಶದ ರಾಯಭಾರಿಯಾಗಿದ್ದ ’ಹುಶೀ’ ಅವರು ಹೇಳಿದ ಮಾತು
ಇಲ್ಲಿ ನೆನಪಾಗುತ್ತಿದೆ ; "ಚೀನಾದ ಮೇಲೆ ಇಪ್ಪತ್ತು ಶತಮಾನಗಳ ಕಾಲ, ಸಾಂಸ್ಕೃತಿಕ
ಪ್ರಭುತ್ವವನ್ನು ಭಾರತದೇಶವು ಸ್ಥಾಪಿಸಿತ್ತು. ಚೀನಾ ದೇಶಕ್ಕೆ ಒಬ್ಬನೇ ಒಬ್ಬ
ಸೈನಿಕನನ್ನೂ ಕಳುಹಿಸದೆಯೇ ಅಂತಹ ಪ್ರಭಾವ ಬೀರಲು ಭಾರತಕ್ಕೆ ಸಾಧ್ಯವಾಯಿತು. ನೆರೆಯ
ದೇಶಗಳ ಮೇಲೆ ತನ್ನ ಸಂಸ್ಕೃತಿಯನ್ನು ಭಾರತ ಎಂದೂ ಬಲವಂತದಿಂದ ಹೇರಲಿಲ್ಲ."

’ವಿಜಯಕರ್ನಾಟಕ’ ಪತ್ರಿಕೆಯ ’ವಾರದಾಗೆ ಒಂದು ಸರತಿ...’ ಅಂಕಣದಲ್ಲಿ (25.7.2007),
ಪತ್ರಕರ್ತ ಅನಂತ್ ಚಿನಿವಾರ ಅವರು ಬರೆದಿರುವ ಅಂಶಗಳಿಗೆ ಪೂರಕವಾಗಿ ಒಂದಿಷ್ಟು
ಮಾತುಗಳನ್ನು ಹೇಳಬಹುದು :

ಒಂದು ದೇಶದ ಗಡಿಯನ್ನು ನಿರ್ಧರಿಸುವುದು ಆ ದೇಶದ ರಾಜಕಾರಣ. ಶಾತವಾಹನರು, ಗುಪ್ತರು,
ಮೌರ್ಯರು ಭಾರತದ ಬಹು ಭಾಗ ಆಳಿರಬಹುದಾದರೂ, ರಾಜರಿಗಿಂತ ಪ್ರಧಾನವಾಗಿ ಸಂಸ್ಕೃತಿ -
ಧರ್ಮಗಳೇ ಭಾರತವನ್ನು - ಭಾರತದ ಸ್ವರೂಪವನ್ನು ನಿರ್ಧರಿಸಿವೆ. ಇಲ್ಲಿನ ಜನ ನೂರೆಂಟು
ಭಾಷೆಗಳ - ಪ್ರಾಂತಗಳ ವೈವಿಧ್ಯತೆಯ ನಡುವೆಯೇ ಕಾಶಿ, ಬದರಿ, ರಾಮೇಶ್ವರಗಳಿಗೆ, ದೇಶದ
ಎಲ್ಲ ಭಾಗಗಳಿಂದ, ಅಕ್ಷರಶಃ ಅನೇಕ ಸಾವಿರ ವರ್ಷಗಳಿಂದ ಹೋಗಿ ಬರುತ್ತಿದ್ದಾರೆ. ಈ
ರಾಷ್ಟ್ರದ ಸಾಂಸ್ಕೃತಿಕ ಗಡಿಗಳನ್ನು, ಇಲ್ಲಿನ ಜನ - ಇಲ್ಲಿನ ಪರಂಪರೆ - ಇಲ್ಲಿನ
ಧರ್ಮಗಳೇ ನಿರ್ಧರಿಸಿವೆ.

ಭಾಷಾ "ಸಮಸ್ಯೆ" ಇತ್ತೀಚಿನ "ಸೃಷ್ಟಿ". ಸಾವಿರಾರು ವರ್ಷಗಳಲ್ಲಿ ಭಾರತೀಯರಿಗೆ,
ವಿದೇಶಿ ಪ್ರವಾಸಿಗಳಿಗೆ ಅದೊಂದು ಸಮಸ್ಯೆಯಾಗಿ ಕಾಡಿಲ್ಲ. ಇಲ್ಲಿನ ತಕ್ಷಶಿಲೆ - ನಳಂದ
ವಿಶ್ವವಿದ್ಯಾಲಯಗಳಲ್ಲಿ ಓದಲು ಬರುತ್ತಿದ್ದ ಸಾವಿರಾರು ವಿದೇಶೀ ವಿದ್ಯಾರ್ಥಿಗಳಿಗೂ
ಭಾಷೆ ಸಮಸ್ಯೆಯಾಗಿ ಕಾಡಲಿಲ್ಲ. ಇಂದು ನಮ್ಮದೇ ದೇಶದ ಹಿಂದಿ - ಕನ್ನಡ - ತಮಿಳು
ಭಾಷೆಗಳನ್ನು ನಾವೇ ಸಮಸ್ಯೆಯಾಗಿ ಮಾಡಿಕೊಳ್ಳುತ್ತಿದ್ದೇವೆ. ಇದೀಗ ರಾಷ್ಟ್ರಪತಿಯಾಗಿ
ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಪ್ರತಿಭಾ ಪಾಟೀಲ್, ಮರಾಠಿಯಲ್ಲೋ
- ಹಿಂದಿಯಲ್ಲೋ ಪ್ರಮಾಣವಚನ ಸ್ವೀಕರಿಸಬಹುದಿತ್ತು. 1996 ರಲ್ಲಿ ಪ್ರಧಾನಮಂತ್ರಿಯಾಗಿ
ಪ್ರಮಾಣವಚನ ಸ್ವೀಕರಿಸಿದ, ನಮ್ಮಂತಹ ಕನ್ನಡಿಗರ ಕಣ್ಮಣಿ, ಸನ್ಮಾನ್ಯ ದೇವೇಗೌಡರೂ,
ಇಂಗ್ಲಿಷ್‍ನ ಬದಲು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಬಹುದಿತ್ತು. "ಸ್ವಾತಂತ್ರ್ಯ"
ಬಂದು (?) ಅರವತ್ತು ವರ್ಷಗಳಾದರೂ ನಮಗೆ ನಮ್ಮದೇ ಭಾಷೆಗಳು ಬೇಡವಾಗಿವೆ, ವಿದೇಶೀ ಭಾಷೆ
ಆಪ್ಯಾಯಮಾನವಾಗಿದೆ.

ಚಿನಿವಾರ ಅವರು "ನಮಗೆ ನಮ್ಮದೇ ಅಂತ ಹೇಳಬಹುದಾದ ಒಂದು ಕಾಮನ್ ಲಾಂಗ್ವೇಜ್ ಇಲ್ಲ.",
ಎಂದು ಬರೆದಿದ್ದಾರೆ. ಕೆಲವು ಬುದ್ಧಿಜೀವಿಗಳೂ ಆ ಮಾತನ್ನು ಆಡುವುದುಂಟು. ಕಾಮನ್
ಲಾಂಗ್ವೇಜ್ ಏಕೆ ಬೇಕು, ಎಂಬುದನ್ನು ನಾವೊಮ್ಮೆ ಯೋಚಿಸಬೇಕು. ಭಾರತದಷ್ಟು
ವಿಸ್ತೀರ್ಣ - ಗಾತ್ರಗಳ (ಮತ್ತು ವಸಾಹತು ಅಲ್ಲದ) ಯಾವ ದೇಶಕ್ಕೆ ಈ ಬಗೆಯ ಕಾಮನ್
ಲಾಂಗ್ವೇಜ್ ಇದೆ ಎಂಬುದನ್ನು ನಾವು ಪರಿಶೀಲಿಸಿ, ಈ ಮಾತನ್ನು ಆಡಬೇಕಾಗಿದೆ. ಕಾಮನ್
ಲಾಂಗ್ವೇಜ್ ಬೇಕು ಎನ್ನುವುದರ ಹಿಂದಿನ ಶಕ್ತಿಗಳು, ಎಲ್ಲ ಭಾರತೀಯ ಭಾಷೆಗಳನ್ನು ಸಾರಾ
ಸಗಟಾಗಿ ಹೂತುಹಾಕಿಬಿಡುತ್ತವೆ.

ನಾನಿಲ್ಲಿ ಬ್ರಿಟಿಷರನ್ನು - ಅವರ ಇಂಗ್ಲಿಷ್ ಭಾಷೆಯನ್ನು ಆಕ್ಷೇಪಿಸುತ್ತಿಲ್ಲ.
ತಪ್ಪು ನಮ್ಮದೇ. ನಮ್ಮಲ್ಲಿ ಒಗ್ಗಟ್ಟಿಲ್ಲ, ಸ್ವಾಭಿಮಾನವಿಲ್ಲ. ನಮ್ಮ ಅಂತಃಕಲಹ -
ನಮ್ಮ ಒಳಜಗಳಗಳು ನಮ್ಮನ್ನು ಈ ಸ್ಥಿತಿಗೆ ತಂದಿಟ್ಟಿವೆ. ನಮ್ಮಲ್ಲಿ ಎಷ್ಟು ಪ್ರತಿಭೆ
ಇದ್ದರೇನು, ಎಂತಹ ಶೌರ್ಯ ಇದ್ದರೇನು ? ಹಿಡಿಯಷ್ಟು ಜನ ಬ್ರಿಟಿಷರು ನಮ್ಮನ್ನು ನೂರಾರು
ವರ್ಷ ಆಳಿದರು, ಅವರ ಭಾಷೆ ಈಗಲೂ (ಮುಂದೆ ಸಹ) ಆಳುತ್ತಿದೆ.

ಮುರಾರಜಿ ದೇಸಾಯಿ ಅಂತಹವರೇ "We were never a nation, before British" ಎಂದರು.
ನೆಹರೂ ಅಂತಹವರ ವಿಷಯ ಮಾತನಾಡದಿರುವುದು ಒಳ್ಳೆಯದು. ಎಲ್ಲ "ವಿದ್ವಾಂಸ"ರ ಒಕ್ಕೊರಲ
ಅಭಿಪ್ರಾಯ ಒಂದೇ : "ಬ್ರಿಟಿಷರಿಗಿಂತ ಮುಂಚೆ, ಇಡೀ ಭಾರತವನ್ನು ಯಾರು ಆಳಿದ್ದಾರೆ ?"
ಎಂಬುದೇ. ಒಟ್ಟಿನಲ್ಲಿ ಒಬ್ಬ ರಾಜ - ಒಬ್ಬ ಬಾದಷಹ ಆಳಿದರೆ ಮಾತ್ರ ಅದೊಂದು ದೇಶ,
ಅದೊಂದು ರಾಷ್ಟ್ರ. ಒಂದು ದೇಶದ ಸಾಂಸ್ಕೃತಿಕ ಆಯಾಮ ನಮಗೆ ಗೌಣ. ಹಾಗೆಂದೇ,
ಭಾರತವನ್ನು "ಬುದ್ಧಿಜೀವಿ"ಗಳು, ಹಲವು ರಾಷ್ಟ್ರಗಳ ಒಂದು ಗುಂಪು ಎನ್ನುತ್ತಾರೆ, ಭಾರತ
ಒಂದು ರಾಷ್ಟ್ರವೇ ಅಲ್ಲ ಎನ್ನುವುದೂ ಉಂಟು. ಸಂವಿಧಾನ ಹೇಳುವ UNION - ಒಕ್ಕೂಟ
ಎನ್ನುವುದು ಆ ಅರ್ಥದಲ್ಲೇ ಎಂಬುದು ಕೆಲವರ ವಾದ. ಸಂವಿಧಾನಶಿಲ್ಪಿ ಡಾ|| ಅಂಬೇಡ್ಕರ್
ಅವರ ದೃಷ್ಟಿಯಲ್ಲಿ , ಅದು ರಾಜ್ಯಗಳ - ಸಂಸ್ಥಾನಗಳ ಒಕ್ಕೂಟವೇ ಹೊರತು, ರಾಷ್ಟ್ರಗಳ
ಒಕ್ಕೂಟ ಅಲ್ಲ. ಬ್ರಿಟಿಷರು "Indian Sub-Continent" ಎಂದು
ಉಲ್ಲೇಖಿಸುತ್ತಿದ್ದುದನ್ನು ನಾವೇ ಅತಿಯಾಗಿ ಮಾಡಿ, ಇದೊಂದು ರಾಷ್ಟ್ರಗಳ ಒಕ್ಕೂಟ
ಎಂದು ಅರ್ಥೈಸುವುದು, ನಮಗೆ ನಾವೇ ಮಾಡಿಕೊಳ್ಳುವ ದ್ರೋಹವಾದೀತು.

ಮೆಕಾಲೆ ಬದಲಾಯಿಸಿದ ನಮ್ಮ ಶಿಕ್ಷಣ ಕ್ರಮ, ಭಾರತೀಯರಲ್ಲಿ ಅಂತಹ ಬದಲಾವಣೆ ತಂದಿದೆ. ಈ
ಮಾತುಗಳು ಇಂಗ್ಲಿಷ್ ಭಾಷಾ ವಿರೋಧ ಧ್ವನಿಸಬಾರದು. ನಮ್ಮ ಭಾಷೆಗಳ ಗತಿ ಏನು ಎಂಬುದೇ
ಆತಂಕ ಉಂಟು ಮಾಡುತ್ತಿದೆ.

ನಮ್ಮ ಅಂತಃಕಲಹ - ನಮ್ಮ ಮೂರ್ಖತನಗಳಿಂದ ನಮ್ಮ ಗಡಿಗಳು ಒಳಗೊಳಗೇ ಸರಿಯುತ್ತಿವೆ.
ಬ್ರಿಟಿಷರು ನೇಪಾಳ, ಭೂತಾನ, ಬ್ರಹ್ಮದೇಶ (ಬರ್ಮಾ), ಶ್ರೀಲಂಕಾಗಳನ್ನು ಮುಂಚೆಯೇ ಬೇರೆ
ಮಾಡಿದರು. ಪಾಕಿಸ್ತಾನ - ಬಂಗ್ಲಾದೇಶ - ಕೈಬಿಟ್ಟುಹೋಗುತ್ತಿರುವ ಕಾಶ್ಮೀರ -
ಅರುಣಾಚಲ ಪ್ರದೇಶಗಳು, ನಮ್ಮ "ನಾಯಕ"ರ "ಸೃಷ್ಟಿ"ಗಳು.

ಭಾರತೀಯ ಪರಂಪರೆ - ಸಂಸ್ಕೃತಿಗಳ ವೈಶಿಷ್ಟ್ಯಗಳನ್ನು ರೂಢಿಸಿಕೊಂಡಿರುವ, ಮೆಚ್ಚುವ,
ಇಂಡೋನೇಷ್ಯಾ - ಕಾಂಬೋಡಿಯಾ - ಫಿಲಿಪ್ಪೈನ್ಸ್ ಅಂತಹ ದೇಶಗಳನ್ನು ನೋಡಿಯಾದರೂ ನಮ್ಮ
ಸಂಸ್ಕೃತಿಯನ್ನು ನಾವು ಗೌರವಿಸಬೇಕಾಗಿದೆ, ಉಳಿಸಿಕೊಳ್ಳಬೇಕಾಗಿದೆ. ಇಪ್ಪತ್ತನೇ
ಶತಮಾನದಲ್ಲಿ ಯೂರೋಪಿನಲ್ಲಿ "ಪ್ರಷ್ಯಾ" ಎಂಬ ದೇಶವಿತ್ತು. ಈಗ ಇಲ್ಲ. ಭಾರತ
ಹಾಗಾಗಬಾರದು. ("ಇಸ್ರೇಲ್" ಇರಲಿಲ್ಲ. ಅದನ್ನ್ನ ಸಹ ನಾವು ಮರೆಯಬಾರದು.)

ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು -
ಪ್ರಭುತ್ವ (STATE) ಎಂಬುದು ಪ್ರಧಾನವಾಗಿ ರಾಜಕಾರಣ ಆಧಾರಿತವಾದುದು, ಎಂಬುದನ್ನು
ನಾವು ಮರೆಯದಿರೋಣ.

ಮಂಜುನಾಥ ಅಜ್ಜಂಪುರ, ಬೆಂಗಳೂರು.
anmanjunath@gmail.com

ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು

ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು
----------------------------------------

ಪುಟ್ಟದೊಂದು ಸರ್ಜರಿಯ ಕಾರಣಕ್ಕೆ, 'ಗೃಹಬಂಧನ'ದಲ್ಲಿರುವ ಈ ಅವಧಿಯಲ್ಲಿ
ಓಡಾಡುವಂತಿಲ್ಲ, ಅಲೆಯುವಂತಿಲ್ಲ. ಅಫ್ ಕೋರ್ಸ್, ಟೈಮ್ ಪಾಸ್ ಹೇಗಪ್ಪಾ ಎಂಬ ಸಮಸ್ಯೆ
ನನಗೆ ಮೊದಲಿನಿಂದಲೂ ಇಲ್ಲ. ನಾನು ಓದಲೇಬೇಕಾಗಿರುವ ಪುಸ್ತಕಗಳು, ಕೇಳಲೇಬೇಕಾಗಿರುವ
ಸಂಗೀತ, ನೋಡಲೇಬೇಕಾಗಿರುವ ಕ್ಲಾಸಿಕ್ ಸಿನೆಮಾಗಳು ಧಂಡಿಯಾಗಿರುವಾಗ, ಉಳಿದಿರುವ
ಜೀವನಪರ್ವವೇ ಸಾಲದೇನೋ ಎನ್ನುವಾಗ, ಎಷ್ಟು ಸಮಯವಿದ್ದರೂ ಸಾಲದು. ಒಂದಿಷ್ಟು ಟಿವಿ
ಹಾಕಿಕೊಂಡೆ.

ಈ ಕಿರುತೆರೆಯ ಪೆಟ್ಟಿಗೆಯಲ್ಲಿ ೭೦ - ೮೦ ವಾಹಿನಿಗಳಿವೆ. ಆದರೂ ಕೆಲವೊಮ್ಮೆ, ಈ
ವಾಹಿನಿಗಳ ಲೋಕದಲ್ಲಿ ಅದೆಷ್ಟೆಷ್ಟು ಸುತ್ತಾಡಿದರೂ, ಚಂದದ ಕಾರ್ಯಕ್ರಮವೊಂದೂ
ಸಿಕ್ಕುವುದಿಲ್ಲ. ಹಿಮೇಶ್ ರೇಶಮ್ಮಯ್ಯ - ಎ.ಆರ್.ರೆಹಮಾನ್ ಅಂತಹವರು ಹಾಡುವಾಗ, ಇವರ
ಪ್ರತಿಭೆಗಿಂತ, ಇವರಿಗೆ ಸಿಕ್ಕ - ಸಿಕ್ಕುತ್ತಿರುವ ಅವಕಾಶಗಳೇ ಜಾಸ್ತಿ
ಅನ್ನಿಸುತ್ತದೆ. ಅದಕ್ಕಿಂತ ಈ ಹಾಡುಗಳ ಅತಿಯಾದ ಪುನಃಪ್ರಸಾರ ತಲೆ ಚಿಟ್ಟು
ಹಿಡಿಸುತ್ತದೆ.

ಹಿಂದೀ ಚಿತ್ರರಂಗದ ಅದೃಷ್ಟವೋ - ಸೌಭಾಗ್ಯವೋ, ಹಿಂದೊಮ್ಮೆ ಮಹಾನ್ ಪ್ರತಿಭೆಗಳೆಲ್ಲಾ
ಒಟ್ಟುಗೂಡಿ ಮರೆಯಲಾಗದ ಮಹಾನ್ ಗೀತೆಗಳ - ಮಹಾನ್ ಸಂಗೀತದ ಸೃಷ್ಟಿಗೆ ಕಾರಣರಾದರು.
ಐವತ್ತರ - ಅರವತ್ತರ ದಶಕಗಳ ಚಿತ್ರಸಾಹಿತಿಗಳಾಗಲೀ, ಸಂಗೀತ ನಿರ್ದೇಶಕರಾಗಲೀ, ಈ
ಸೃಷ್ಟಿಯ ಉಪಕರಣಗಳಾದರು. ಮುಖೇಶ್, ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಹೇಮಂತ್
ಕುಮಾರ್, ಲತಾ ಮಂಗೇಶ್ಕರ್, ಆಶಾ ಭೋ‍ಸ್ಲೆ ಅವರೆಲ್ಲರ ಗಾಯನ ಪ್ರತಿಭೆಗೆ ಸಚಿನ್‍ದೇವ್
ಬರ್ಮನ್, ಶಂಕರ್-ಜೈಕಿಷನ್, ಮದನ್ ಮೋಹನ್, ನೌಶಾದ್, ವಸಂತ್ ದೇಸಾಯಿ, ಓ.ಪಿ.ನಯ್ಯಾರ್
ಅಂತಹ ಸಂಗೀತ ನಿರ್ದೇಶಕರಿಗೆ ದೊರೆತ ಚಿತ್ರಸಾಹಿತಿಗಳೂ ಅಂತಹ ಘಟಾನುಘಟಿಗಳೇ.
ಶೈಲೇಂದ್ರ, ಹಸರತ್ ಜೈಪುರಿ, ಭರತ್ ವ್ಯಾಸ್, ಶಕೀಲ್ ಬದಾಯುನಿ, ಮಜ್ರೂಹ್
ಸುಲ್ತಾನ್‍ಪುರಿ, ಒಬ್ಬೊಬ್ಬರ ಕೊಡುಗೆಯೂ ಅಪೂರ್ವವೇ. ಇಲ್ಲಿ ಶಾಂತಾರಾಮ್,
ರಾಜ್‍ಕಪೂರ್ ಅಂತಹ ಚಿತ್ರನಿರ್ಮಾತೃಗಳ ಕೊಡುಗೆಯೂ ಕಡಿಮೆಯದಲ್ಲ.

ಸಂಗೀತ ನಿರ್ದೇಶಕ ಎಸ್.ಡಿ.ಬರ್ಮನ್ ಅವರು ಹಾಡಿದ "ಸುನ್ ಮೇರೇ ಬಂಧೂರೇ, ಸುನ್ ಮೇರೇ
ಮಿತುವಾ", ಮತ್ತೆ ಮತ್ತೆ ಕಿವಿಗಳಲ್ಲಿ ಅನುರಣಿಸುತ್ತದೆ. ಚಿತ್ರಸಾಹಿತಿ ಆನಂದ್
ಭಕ್ಷಿ ಅನೇಕ ನೂರು ಜನಪ್ರಿಯ ಚಿತ್ರಗೀತೆ ಬರೆದಿದ್ದಾರೆ. ಅವರು "ಮೋಮ್‍ಕೀ ಗುಡಿಯಾ"
ಚಿತ್ರಕ್ಕಾಗಿ ಬರೆದು - ಹಾಡಿದ "ಬಾಗ್ಞೋ ಮೇ ಬಹಾರ್ ಆಯೀ ಹೋಟ್ಞೋಸೆ ಪುಕಾರ್ ಆಯೀ ಅಜಾ
ಆಜಾ" ಅದ್ಭುತವಾಗಿತ್ತು. ಅವರು ಲತಾ ಮಂಗೇಶ್ಕರ್ ಅವರೊಂದಿಗೆ, ಅವರ ಸರಿಸಮನಾಗಿ
ಯುಗಳಗೀತೆ ಹಾಡಿದ್ದರು. ಸಂಗೀತ ನಿರ್ದೇಶಕ ಮದನ್ ಮೋಹನ್ ಅತ್ಯುತ್ತಮ ಸಂಗೀತ
ನೀಡಿದ್ದಾರೆ. "ದಸ್ತಕ್" ಚಿತ್ರಕ್ಕಾಗಿ ಅವರೇ ಹಾಡಿ-ನಿರ್ದೇಶಿಸಿದ "ಓ ಮಾಯಿರೇ, ಮೈ
ಕ್ಞಾ ಸೆ ಕಹ್ಞೂ ಅಪನೇ ಪಿಯಾಕೀ" ಹಾಡಂತೂ ಆ ಸಿನೆಮಾದಲ್ಲಿ ಇಲ್ಲದಿದ್ದರೂ
ಜನಪ್ರಿಯವಾಗಿತ್ತು. ರೇಡಿಯೋದಲ್ಲಿ ಅದು ಪ್ರಸಾರವಾಗುವುದನ್ನು ನಾವು ಕಾದು ಕೂತು
ಕೇಳುತ್ತಿದ್ದೆವು.

ಅರವತ್ತು - ಎಪ್ಪತ್ತರ ದಶಕದಲ್ಲಿ ನಮ್ಮಲ್ಲೂ ಹೀಗೆಯೇ ಕೆಲವು ಸಂಗೀತ ನಿರ್ದೇಶಕರು,
ಹಾಗೂ ಒಂದಿಷ್ಟು ಜನ ನಟರು - ಹಾಡಿದಾಗ, ನಾವೆಲ್ಲ ತುಂಬ ಸಂಭ್ರಮ ಪಟ್ಟಿದ್ದಿದೆ.
ಜಿ.ಕೆ.ವೆಂಕಟೇಶ್ ಅವರು ಹಾಡಿದ

"ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾ, ಸೂತ್ರವ ಹರಿದಾ ಗೊಂಬೆಯ ಮುರಿದ"

"ವಿರಸವೆಂಬ ವಿಷಕೆ ಬಲಿಯಾದೆಯೇತಕೆ",

ಅಂತೆಯೇ, (ರಾಜನ್ - ನಾಗೇಂದ್ರ ಖ್ಯಾತಿಯ) ನಾಗೇಂದ್ರ ಹಾಡಿದಾಗಲೂ ವಿಶೇಷ
ಎನ್ನಿಸಿತ್ತು. ರವಿ (ಕೆ.ಎಸ್.ಎಲ್.ಸ್ವಾಮಿ) ಹಾಡಿದ

"ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು, ನಗತಾದ ಭೂತಾಯಿ ಮನಸು"

ಅಂತೂ ದಾಖಲೆಯನ್ನೇ ನಿರ್ಮಿಸಿತು. ನಟ ಆರ್.ಎನ್.ಸುದರ್ಶನ್ ಅವರು ಹಾಡಿದ "ಹೂವೊಂದು
ಬಳಿ ಬಂದು ತಾಕಿತು ಎನ್ನೆದೆಯಾ" ಇತ್ಯಾದಿ ಹಾಡುಗಳು ಗಾಯನಶೈಲಿಯ ಮೃದುತ್ವದ ವಿಶಿಷ್ಟ
ಅಭಿವ್ಯಕ್ತಿ ಎಂದೆನಿಸಿದ್ದುಂಟು. ಪುಟ್ಟಣ್ಣ ಕಣಗಾಲ್ ಅಂಥ ನಿರ್ದೇಶಕರು, ಅವರ
ಪ್ರಯೋಗಶೀಲತೆ, ಅವರು ಹೊಸ ಕಲಾವಿದರನ್ನು ಪರಿಚಯಿಸುತ್ತಿದ್ದುದು ನೆನಪಾಗುತ್ತಿದೆ.
ಅಂದಿನ ಲೋಕದ ಬಗೆಯೇ ಬೇರೆ. ಆಫ್-ಸ್ಕ್ರೀನ್ ಕಲಾವಿದರ - ಸಂಗೀತ ನಿರ್ದೇಶಕರ - ಆ
ಸಂಗೀತ ಸಾಧನಗಳ, ಮುಖ ಪರಿಚಯವೇ ಇರಲಿಲ್ಲ. ನಮ್ಮ ಕಿವಿಗಳ ಮೂಲಕವೇ ಅವರೆಲ್ಲರ
ಪರಿಚಯ. ಅಂದಿನದು ಬರಿಯ ಶ್ರವ್ಯ-ಪ್ರಪಂಚ.

ಹಾಗೆಂದೇ, ಈಗಲೂ ಹಿಮಾಲಯದ ಯಾವುದೋ ಉತ್ತುಂಗದಲ್ಲಿ, ಮಲೆನಾಡಿನ ಕಾಡಿನ
ಮೂಲೆಯೊಂದರಲ್ಲಿ, ಕಣ್ಣು ಮುಚ್ಚಿದರೆ ಸಾಕು, ಕಿವಿಯಲ್ಲಿ ರಾಗಸುಧೆ ಹರಿಯುತ್ತದೆ.
ಧ್ಯಾನ - ಮೆಡಿಟೇಶನ್ ಎಂದು ಕುಳಿತರೂ ಅದೇ ಸ್ವಪ್ನಲೋಕದ ಧಿಮಿಧಿಮಿ. ಸಂಗೀತ
ನಿರ್ದೇಶಕ ಹೇಮಂತ್ ಕುಮಾರ್ ಹಾಡಿದ "ತುಮ್ಹೇ ಯಾದ್ ಹೋಗಾ ಕಭೀ ಹಂ ಮಿಲೇಥೆ,
ಮೊಹಬ್ಬತ್ ಕೀ ರಾಹ್ಞೋ ಮೇ ಮಿಲ್ ಕೇ ಚಲೇಥೇ", "ನ ತುಮ್ ಹಮೇ ಜಾನೋ, ನ ಹಂ ತುಮ್ಹೆ
ಜಾನೇ", ಅಂತೆಯೇ ಎಸ್.ಡಿ.ಬರ್ಮನ್ ಹಾಡಿದ "ವಹ್ಞಾ ಕೌನ್ ಹೈ ತೇರಾ ಮುಸಾಫಿರ್ ಜಾಯೆಗಾ
ಕಹ್ಞಾ", "ಮೇಘ್‍ದೇ, ಪಾನಿದೇ" ನೆನಪಾದರೆ ಅಚ್ಚರಿಯಿಲ್ಲ. ಆ ಹಾಡುಗಳೇ ಹಾಗೆ. ಸ್ವತಃ
ಆ ಸಂಗೀತ ನಿರ್ದೇಶಕರಿಗೆ ತಾವೇ ಹಾಡಿಬಿಡೋಣ ಎನಿಸಿದಂಥವು ಅವು.

ಕೆಲವು ಸಂಗೀತ ನಿರ್ದೇಶಕರ - ಕಲಾವಿದರ ಗಾಯನ ಪ್ರತಿಭೆಯನ್ನು, ನಮ್ಮ ಸಿನೆಮಾ ಪ್ರಪಂಚ
ಇನ್ನಷ್ಟು ಬಳಸಿಕೊಳ್ಳಬಹುದಿತ್ತು, ಎಂದೆನಿಸುವಾಗ ವಿಸ್ಮಯದ ಭಾವ.

ಮಂಜುನಾಥ ಅಜ್ಜಂಪುರ.

anmanjunath@gmail.com

ಮಾಧ್ಯಮಗಳ ಸನ್ಮಿತ್ರರಿಗೊಂದು ಸವಿನಯ ಮನವಿ

ಮಾಧ್ಯಮಗಳ ಸನ್ಮಿತ್ರರಿಗೊಂದು ಸವಿನಯ ಮನವಿ


ಸತ್ಯಶೋಧನೆ,ಸಾರ್ವಜನಿಕ ಹಿತಾಸಕ್ತಿಗಳು ಪತ್ರಿಕೋದ್ಯಮ(ಸಮೂಹ ಮಾಧ್ಯಮ)ದ ಅಡಿಪಾಯಗಳಾಗಿದ್ದ ಕಾಲವೊಂದಿತ್ತು.ಅದು ಸತ್ಯಯುಗದ ಕಾಲ, ಇಂದಿನ ಕಲಿಯುಗಕ್ಕೆ ಹೊಂದುವುದಿಲ್ಲ ಎಂಬ ಭಾವನೆ,ಮಾಧ್ಯಮಗಳ ಇಂದಿನ ಕೆಲವು ಮಿತ್ರರಿಗೆ ಇದ್ದಂತಿದೆ.

Manjunath Ajjampuraಕನ್ನಡದ ಕೆಲವು ಸುದ್ದಿವಾಹಿನಿಗಳು, ಹಿಂದಿ /ಇಂಗ್ಲಿಷ್ ಭಾಷೆಗಳ ಕೆಲವು ವಾಹಿನಿಗಳು, ಒಂದೆರಡು ಪತ್ರಿಕೆಗಳು,ಭಯೋತ್ಪಾದಕರ ಕುಟುಂಬದವರಿಗೆ ಇದೀಗ ನೀಡುತ್ತಿರುವ ಪ್ರಚಾರ ಅಪಾಯಕಾರಿಯಾಗಿದೆ,ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ. ಬಂಧಿತರ ತಾಯಿಯಾಗಲೀ, ಕುಟುಂಬದ ಉಳಿದ ಸದಸ್ಯರಾಗಲೀ, ಆಪಾದಿತರನ್ನು ಅಮಾಯಕರೆಂದೇ ಪ್ರತಿಪಾದಿಸುತ್ತಾರೆ. ಅದರಲ್ಲಿ ಆಶ್ಚರ್ಯಪಡುವಂತಹುದೇನಿಲ್ಲ. 'ನಮ್ಮ ಮಗನಿಗೆ ಭಯೋತ್ಪಾದಕರೊಂದಿಗೆ ಸಂಪರ್ಕವಿತ್ತು'ಎಂದು ಯಾರು ತಾನೇ ಹೇಳಿಯಾರು ? ಬಿಡಿ. ಪ್ರಶ್ನೆ ಅದಲ್ಲ.ಅವರಿಗೆ ಅಷ್ಟೊಂದು ಪ್ರಚಾರ ಏಕೆ ?

ನಿಜವಾಗಲೂ ವಿಸ್ಮಯ, ವಿಚಿತ್ರ ಎನಿಸುವುದು. ಈ ಕಾರಣಕ್ಕೇ.

ಜನಮಾನಸದ ಹೆಂಗರುಳು ಬೇಗ ಕರಗಿಹೋಗಿಬಿಡುತ್ತದೆ.ಯಾವುದೋ ಸುದ್ದಿಯ ತುಣುಕು, ಇನ್ನಾವುದೋ ದೃಶ್ಯ - ಶ್ರವ್ಯ (ವೀಡಿಯೋ) ತುಣುಕು, ಸಾರ್ವಜನಿಕರ ಬಹುಕಾಲದ ಮಾನಸಿಕತೆಯನ್ನೇ ಬದಲಿಸಿಬಿಡುತ್ತದೆ. ಭಯೋತ್ಪಾದಕರಿಂದ ತೊಂದರೆಗೀಡಾದ - ಹತ್ಯೆಗೀಡಾದ ಸಾರ್ವಜನಿಕರ - ಪೊಲೀಸರ ದುಃಖ ದುಮ್ಮಾನಗಳನ್ನು ತಕ್ಷಣ ಮರೆತು, ಭಯೋತ್ಪಾದಕರ ಮನೆಯವರ ಬಗೆಗೆ "ಅಯ್ಯೋ ಪಾಪ" ಎಂದುಬಿಡುತ್ತೇವೆ.ಇದು ಮಾಧ್ಯಮದ ಕೆಲವರ "ಕೊಡುಗೆ". ಅನಗತ್ಯ ವೃತ್ತಿ ಸಂಬಂಧಿತ ಸ್ಪರ್ಧೆ ಮತ್ತು ರೋಚಕತೆಗಳಿಗೆ ಶರಣಾಗುವುದರಿಂದಾಗುವ ಅಪಾಯವಿದು.

ನಕ್ಸಲೀಯರು ಶೇಷಪ್ಪಗೌಡ, ಕೆಸಮುಡಿ ವೆಂಕಟೇಶರನ್ನು, ಪೊಲೀಸರಿಗೆ ಮಾಹಿತಿ ನೀಡಿದರೆಂಬ ಕಾರಣಕ್ಕೆ ಅಮಾನುಷವಾಗಿ ಕೊಂದು ಹಾಕಿದರು.ಆ ಕುಟುಂಬಗಳ ಕಥೆಯೇನು? ಗತಿಯೇನು? ನಕ್ಸಲರನ್ನು ನಿಗ್ರಹಿಸಲು ಮೀಸಲಾಗಿ, ಊಟ - ತಿಂಡಿ- ವಿಶ್ರಾಂತಿ ಇಲ್ಲದೆ ಕಾಡು-ಮೇಡು ಅಲೆಯುತ್ತಿರುವ ಪೊಲೀಸ್ ಪೇದೆಗಳ ಗತಿಯೇನು ? ವಿಚಿತ್ರವೆಂದರೆ ಹಿಂಸೆಯನ್ನೇ ಅಸ್ತ್ರವನ್ನಾಗಿಟ್ಟುಕೊಂಡಿರುವ ನಕ್ಸಲ್ ಹುಡುಗ ಹುಡುಗಿಯರಿಗೆ, ಅವರ ಸಾವಿಗೆ ಸಿಕ್ಕುವ ಪ್ರಚಾರ,ದುರದೃಷ್ಟದಿಂದ ನಕ್ಸಲರಿಂದ ಹತ್ಯೆಗೀಡಾದ ಪೊಲೀಸರ ಕುಟುಂಬಗಳಿಗೆ -ಸಾರ್ವಜನಿಕರಿಗೆ ಸಿಕ್ಕುತ್ತಿಲ್ಲ.

ಹಿಂದೆ ವೀರಪ್ಪನ್ ಪ್ರಕರಣದಲ್ಲೂ ಹೀಗೇ ಆಗಿತ್ತು.ನೂರಾರು ಜನ ಪೊಲೀಸರನ್ನು,ಅಧಿಕಾರಿಗಳನ್ನು ಆತ ನಿರ್ದಯವಾಗಿ ಕೊಂದು ಹಾಕಿದ್ದ.ವೀರಪ್ಪನ್ ಅಂತಹವರಿಗೆ ಕ್ಷಮೆಯೇ ಇಲ್ಲ.ಆದರೆ,ವೀರಪ್ಪನ್ ಸಾವಿನ ನಂತರ,ಕೆಲವು ವಾಹಿನಿಗಳವರು, ಅವನ ಹೆಂಡತಿ ಮುತ್ತುಲಕ್ಷ್ಮಿಗೆ ಅವಳ ನೋವಿಗೆ -ಅವಳ ಆರ್ಭಟಕ್ಕೆ ವಿಪರೀತ ಪ್ರಚಾರ ನೀಡಿದರು. ಅವಳ ಮಗುವಿನ ಭವಿಷ್ಯವೇನು ಎಂಬ ಕರುಣಾರ್ದ್ರ ಪ್ರಶ್ನೆಗಳನ್ನು ವೀಕ್ಷಕರಿಗೆ ಹಾಕಲಾಯಿತು.

ಹನೀಫ್ - ಸಬೀಲ್ ಸದ್ಯಕ್ಕೆ ಆಪಾದಿತರಿರಬಹುದು, ಅಪರಾಧಿಗಳೆಂದು ಇನ್ನೂ ಸಾಧಿತವಾಗದೇ ಇರಬಹುದು. ಅವರ ಕುಟುಂಬಗಳಿಗೆ ಸಿಕ್ಕುತ್ತಿರುವ ಪ್ರಚಾರ ಅನಾರೋಗ್ಯಕರ.ಸಂಸತ್ತಿನ ಮೇಲೆ ದಾಳಿಮಾಡಿದ ಭಯೋತ್ಪಾದಕನಿಗೆ ಕ್ಷಮಾದಾನ ಸಿಕ್ಕಬೇಕೆಂದು ಕೆಲವರು ಪ್ರದರ್ಶನ ಮಾಡಿದುದು ಸಹ ಈ ಸಾಲಿಗೇ ಸೇರುವಂತಹುದು.ಅವರಿಗೆ ದೊರೆತ ಅತಿಯಾದ ಪ್ರಚಾರವೂ ಬೇಸರ ತರಿಸುವಂತಹುದು. ಸಂಸತ್ತಿನ ಮೇಲಾದ ಆ ದಾಳಿಯಲ್ಲಿ ಮಡಿದ ರಕ್ಷಣಾ ಸಿಬ್ಬಂದಿಯ ಮನೆಯವರಿಗೆ ಇನ್ನಷ್ಟು ನೋವು ತರುವುದು ಶೋಭೆ ತರುವುದಿಲ್ಲ.ನಮ್ಮನ್ನು ಉಳಿಸಲುಹೋದವರು ಅವರು.

ಮುಸ್ಲಿಮರಲ್ಲಿ ಪ್ರೊ.ಮಮ್ತಾಜ್ ಅಲಿ ಖಾನ್ ಅಂತಹವರು, ಕನ್ನಡದ ಬಗ್ಗೆ ಹೋರಾಟ ಮಾಡಿ ಜನರ ಗೌರವ ಪಡೆದಂಥವರು. ಶಾಂತಿ, ಸೌಹಾರ್ದ, ಮಾನವಹಕ್ಕುಗಳು, ಸ್ವಾಭಿಮಾನ, ಸಮಾನತೆಗಳಿಗಾಗಿ ತಮ್ಮ "ಕ್ರಶ್
(CRUSH)" ಪತ್ರಿಕೆಯ ಮೂಲಕ, ಅವರು ಮೂಢನಂಬಿಕೆಗಳ ವಿರುದ್ಧ, ಶೋಷಣೆ - ಅತ್ಯಾಚಾರ - ಅನ್ಯಾಯಗಳ ವಿರುದ್ಧ ದನಿ ಎತ್ತುತ್ತಿದ್ದಾರೆ. ಎಂತಹ ವಿರೋಧಾಭಾಸ. ಪ್ರೊ.ಮಮ್ತಾಜ್ ಅಲಿ ಖಾನ್ ಅವರಿಗಿಂತ, ಪ್ರಗತಿಪರ ಮುಸ್ಲಿಮರಿಗಿಂತ ಭಯೋತ್ಪಾದಕ ಮುಸ್ಲಿಮರ ಮನೆಯವರು ಪ್ರಚಾರ ಗಳಿಸುತ್ತಾರೆ.

ಪ್ರೀತಿಯ ಪತ್ರಕರ್ತ ಮಿತ್ರರೇ,ಪ್ಲೀಸ್ ಪ್ಲೀಸ್, ನಿಮ್ಮ ಕೆಲಸ ಆರೋಗ್ಯಕರ ಸಮಾಜವನ್ನು ಎಚ್ಚರಿಕೆಯಿಂದ ಕಟ್ಟುವುದೇ ಆಗಿರಲಿ. ನಮಸ್ಕಾರ.

ತುರ್ತುಪರಿಸ್ಥಿತಿ, ನನ್ನ ನೆನಪು

ನೆನಪಿದೆಯಾ? ಜೂನ್ 26. ನೆನಪಾಯಿತಾ? ನನ್ನ ನೆನಪು 32 ವರ್ಷಗಳಷ್ಟು ಹಿಂದೆ ಹಿಂದೆ ಓಡುತ್ತಿದೆ. ಅದೇಕೋ ಮಾಧ್ಯಮದ ಬಹುಪಾಲು ಜನ ತುರ್ತು ಪರಿಸ್ಥಿತಿಯನ್ನು ಮರೆತೇಬಿಟ್ಟಿದ್ದಾರೆ.
A date with 26 Juneಅಂದು 26 ಜೂನ್ 1975ರ ಮುಂಜಾನೆ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಆಕಾಶವಾಣಿಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು. ಆಗ ದೂರದರ್ಶನ ಇರಲಿಲ್ಲ.

"ಕೆಲವರು ಸೈನಿಕರನ್ನು ಸರ್ಕಾರದ ವಿರುದ್ಧ ದಂಗೆ ಏಳುವಂತೆ ಕರೆ ಕೊಟ್ಟಿದ್ದಾರೆ, ವಿರೋಧಪಕ್ಷಗಳು ಅರಾಜಕತೆಯನ್ನು ಉಂಟುಮಾಡಲು ಯತ್ನಿಸುತ್ತಿವೆ", ಇತ್ಯಾದಿ, ಇತ್ಯಾದಿ. ಜನ ನಂಬುತ್ತಾರೆ ಎಂದುಕೊಂಡಿದ್ದರು, ಇಂದಿರಾಜಿ. ಅವರು ಹಾಗೆ ಅಟ್ಯಾಕ್ ಮಾಡಿದ್ದು ಜಯಪ್ರಕಾಶ ನಾರಾಯಣರನ್ನು. ರಾತ್ರೋರಾತ್ರಿ ವಿರೋಧಪಕ್ಷದವರನ್ನು, ಅಷ್ಟೇಕೆ ಎಲ್ಲ ಬಗೆಯ ವಿರೋಧಿಗಳನ್ನು ಬಂಧಿಸಲಾಯಿತು.ನಂತರದ್ದು ಇತಿಹಾಸ.

ತುರ್ತುಪರಿಸ್ಥಿತಿಯ ಅಕ್ರಮ, ಅನ್ಯಾಯ, ಸ್ವೈರಾಚಾರಗಳ ಬಗ್ಗೆ ಉದ್ದುದ್ದ ಬರೆಯಬೇಕಿಲ್ಲ. ನೋವಾಗುವುದೇ ಬೇರೆ ಬೇರೆ ಕಾರಣಗಳಿಗೆ.

ಇಡೀ ದೇಶದಲ್ಲಿ ಆಡಳಿತ ಪಕ್ಷವಾದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಒಬ್ಬನೇ ಒಬ್ಬ ಎಮ್.ಪಿ., ಒಬ್ಬನೇ ಒಬ್ಬ ಎಮ್.ಎಲ್.ಎ. ತುರ್ತು ಪರಿಸ್ಥಿತಿಯನ್ನು ಪ್ರತಿಭಟಿಸಿ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲಿಲ್ಲ (ಪ್ರಾಯಶಃ ಇಂದಿಗೂ ಕಾಂಗ್ರೆಸ್ ಪಕ್ಷದ ಗುಣಲಕ್ಷಣದಲ್ಲಿ ಬದಲಾವಣೆಯಿಲ್ಲ.). ವಿರೋಧ ಪಕ್ಷದವರನ್ನು ಬಿಡಿ, ಎಲ್ಲಾ ಜೈಲಿನಲ್ಲಿದ್ದರು. ಸ್ವಾತಂತ್ರ್ಯ ತಂದುಕೊಟ್ಟೆವು, ಎಂದು ಇಂದಿಗೂ ಹೇಳಿಕೊಳ್ಳುವ, ಮಹಾತ್ಮಾ ಗಾಂಧೀಜಿಯವರ ಹೆಸರು ಹೇಳಿಕೊಂಡೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಸಂಸತ್ ಸದಸ್ಯರು, ಶಾಸಕರು ಮಾಡಿದ್ದು ಹೀಗೆ.

ಕೆಲವು ಪತ್ರಿಕೆಗಳು, ಇಂದಿರಾ ಬಗ್ಗಿ ಎಂದದ್ದಕ್ಕೆ ಅಡ್ಡಡ್ಡ ಮಲಗಿಯೇ ಬಿಟ್ಟವು. ನಮ್ಮ ಮಹಾನ್ ಸಾಹಿತಿಗಳು ಸಿನಿಮಾ ತೆಗೆಯಲು, ಮಲೆನಾಡಿನಲ್ಲಿ ಮೀನು ಹಿಡಿಯಲು, ಯಾರಿಗೂ ಅರ್ಥವಾಗದ ಕವಿತೆಗಳಲ್ಲಿ ಗೂಢ ಸಂಕೇತಗಳನ್ನು ತುಂಬುವಲ್ಲಿ ಮರೆಯಾಗಿಹೋದರು. ಅಂದು ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಪ್ರತಿಭಟಿಸಿದವರಾರು, ಜೈಲುಗಳಿಗೆ ಹೋದವರಾರು ಎನ್ನುವುದನ್ನು ನೆನಪು ಮಾಡಿಕೊಂಡರೆ ಬೇಸರವಾಗುತ್ತದೆ, ನೋವಾಗುತ್ತದೆ.

ಇಂದು ಸಹಾ ಮೇಲ್ನೋಟಕ್ಕೆ ಕಾಣುವಷ್ಟು ಪರಿಸ್ಥಿತಿ ಆಶಾದಾಯಕವಾಗಿಲ್ಲ. ಯುವಜನಾಂಗ ವಿದೇಶೀ ಕಂಪನಿಗಳಲ್ಲಿ ಕೆಲಸ ಮಾಡುತ್ತಾ, ಯಾವುದಕ್ಕೂ ವೇಳೆಯಿಲ್ಲದೆ ಆತ್ಮರತಿಯಲ್ಲಿ ಮುಳುಗಿದೆ. ದೇಶದ ಬಗ್ಗೆ, ಸ್ವಾತಂತ್ರ್ಯದ ಮಹತ್ವದ ಬಗ್ಗೆ ಕಳಕಳಿ ತೋರಲು ಯಾರಿಗೂ ಪುರುಸೊತ್ತು ಇಲ್ಲ. ಮತ್ತೊಮ್ಮೆ ತುರ್ತು ಪರಿಸ್ಥಿತಿಯನ್ನು ನಮ್ಮ ಮೇಲೆ ಹೇರಿದರೆ, ಪ್ರತಿಭಟನೆಯೇ ಇರುವುದಿಲ್ಲವೇನೋ ಎಂಬ ಭಯವಿದೆ.

ನಾವು ಚಿಕ್ಕವರಾಗಿದ್ದಾಗ ನಗೆಹನಿಯೊಂದು ಜನಪ್ರಿಯವಾಗಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿ, ಇಂಗ್ಲೆಂಡ್ ಮತ್ತು ರಷ್ಯಾ ದೇಶಗಳಿಗೆ ಸೇರಿದ ಮೂರು ನಾಯಿಗಳು ಒಂದೆಡೆ ಸೇರಿದ್ದವಂತೆ. ಇಂಗ್ಲೆಂಡಿನ ನಾಯಿ, ತನಗೆ ತಿನ್ನಲು ಬ್ರೆಡ್ಡೇ ಸಿಕ್ಕುತ್ತಿಲ್ಲ ಎಂದಿತಂತೆ. ಜರ್ಮನಿಯ ನಾಯಿ ಸಹ ತಾನು ಸಹ ಬ್ರೆಡ್ ತಿಂದು ಬಹಳ ದಿನವಾಯಿತೆಂದು ದುಃಖ ತೋಡಿಕೊಂಡಿತಂತೆ. ರಷ್ಯಾದ ನಾಯಿ ನಿಧಾನವಾಗಿ ತನಗೆ ಬ್ರೆಡ್ಡೇನೋ ಸಿಕ್ಕುತ್ತಿದೆ. ಆದರೆ ಬೊಗಳುವ ಹಾಗೇ ಇಲ್ಲ, ಎಂದಿತಂತೆ.

ತುರ್ತು ಪರಿಸ್ಥಿತಿಯಲ್ಲಿ ನಾವು, "ಭಾರತದ ನಾಯಿಗೆ ಈ ಕಡೆ ಬ್ರೆಡ್ಡೂ ಇಲ್ಲ, ಬೊಗಳುವ ಹಾಗೂ ಇಲ್ಲ", ಎಂದು ನಗುತ್ತಿದ್ದೆವು.

'ನೀವು ರಾಷ್ಟ್ರೀಯರೋ, ಭಾರತೀಯರೋ ?'ನನ್ನನ್ನು ಮತ್ತು ನನ್ನ ಜೊತೆ ಬಂಧಿತರಾದ ನನ್ನ ಗೆಳೆಯರನ್ನು ಸ್ಟೇಷನ್ನಿನಲ್ಲಿ ಪೊಲೀಸರು ಹೀಗೆ ಪ್ರಶ್ನಿಸಿದಾಗ, ನಾವು ಅಕ್ಷರಶಃ ಸ್ಥಂಭೀಭೂತರಾದೆವು. ಏನು ಹೇಳಬೇಕೆಂದೇ ತಿಳಿಯಲಿಲ್ಲ.

ಪೊಲೀಸರು ಬಂಧಿತರ ವಿವರಗಳನ್ನು ಪ್ರಿಸನರ್ಸ್ ಸರ್ಚ್ ರಿಜಿಸ್ಟರಿನಲ್ಲಿ ಬರೆದುಕೊಳ್ಳುತ್ತಾರೆ. ನಂತರ ತಿಳಿಯಿತು. ನಾವು "ರಾಷ್ಟ್ರೀಯ" ಸ್ವಯಂಸೇವಕ ಸಂಘಕ್ಕೆ ಸೇರಿದವರೋ, "ಭಾರತೀಯ" ಜನಸಂಘಕ್ಕೆ ಸೇರಿದವರೋ ತಿಳಿಯುವುದು ಪೊಲೀಸರ ಉದ್ದೇಶವಾಗಿತ್ತು. ನಮಗೆಲ್ಲಾ ತುಂಬಾ ನಗು ಬಂತು.

ಏನೇ ಇರಲಿ, ಸ್ವಾತಂತ್ರ್ಯದ ಮೂಲತತ್ವಗಳಲ್ಲಿ ನಮ್ಮ ಜನರಿಗೆ ಇವತ್ತೂ ಸಹ ಪ್ರೀತಿ, ಗೌರವ ಹುಟ್ಟಿಸಬೇಕಿದೆ.


09 September 2008

ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಅಪರಾಧವಾಯಿತೇ ?

ಆಗಸ್ಟ್ ತಿಂಗಳು ಬಂದಿತೆಂದರೆ, ಮನಸ್ಸು ಭಾರವಾಗಿಬಿಡುತ್ತದೆ. ಶ್ರಾವಣ - ಭಾದ್ರಪದಗಳ ಹಬ್ಬಸಾಲಿನ ಸಂಭ್ರಮ ಹಿಂದೆ ಸರಿದು, ಅಂತರಂಗದಲ್ಲಿ, ಸುಭಾಷ್ ಚಂದ್ರ ಬೋಸ್, ಗಾಂಧೀಜಿ, ಆಜಾದ್ ಚಂದ್ರಶೇಖರ್, ಭಗತ್ ಸಿಂಗ್ ಅವರ ನುಡಿಗಳ ಧೀಂ - ಧೀಂ ರಿಂಗಣ ಆರಂಭವಾಗಿಬಿಡುತ್ತದೆ. ನಿಜ, ನಮ್ಮಂತಹ ಸ್ವಾತಂತ್ರ್ಯೋತ್ತರ ಭಾರತಮಾತೆಯ ತನುಜಾತರಿಗೆ, ಸ್ವಾತಂತ್ರ್ಯ ಹೋರಾಟವು ಲೈಬ್ರರಿಗಳ ಧೂಳು ಹಿಡಿದ ಪುಸ್ತಕಗಳ ನಡುವಿನ ಆಕ್ರಂದನ ಮಾತ್ರ. ನಾವು ಹೇಗಿದ್ದೆವು, ಈಗ ಹೇಗಿದ್ದೇವೆ, ನಮ್ಮ ಪರಂಪರೆ ಎಂತಹುದು, ಬ್ರಿಟಿಷರ ಬೂಟುಗಾಲುಗಳ ಅಡಿ ಹುಳುಗಳಿಗಿಂತ ಕಡೆಯಾಗಿ ಬಿದ್ದಿದ್ದೆವೇಕೆ, ಎಂದೆಲ್ಲಾ ಕೇಳಿಕೊಂಡು ಆಸಕ್ತಿ ವಹಿಸಿ ಹಿರಿಯರನ್ನು ಕೇಳಿ, ಅವರ ಸ್ಮೃತಿಚಿತ್ರಗಳನ್ನು ದಾಖಲಿಸಿಕೊಂಡರೆ, ಈ ಸ್ವಾತಂತ್ರ್ಯ ಎನ್ನುವುದು ಒಂದಿಷ್ಟು ಅರ್ಥವಾದೀತು. ನಮ್ಮ ಜನರ ಹೋರಾಟದ ಆಯಾಮಗಳನ್ನು ಅರಿಯುವಲ್ಲಿ, ನಮಗೆ ಮುತುವರ್ಜಿ ಇಲ್ಲವೆಂದಾದರೆ, ಸ್ವಾತಂತ್ರ್ಯ ದಿನಾಚರಣೆಯು ಬರಿಯ ಒಂದು ನಿರರ್ಥಕ ರಜೆಯೆನಿಸಿಬಿಡುತ್ತದೆ.

ಗಾಂಧೀಜಿ - ನೆಹರೂ ಇಬ್ಬರೇ ಈ ಸ್ವಾತಂತ್ರ್ಯ ತಂದುಕೊಟ್ಟರು ; ರಕ್ತಪಾತವಿಲ್ಲದೆ ಹೀಗೆ ಸ್ವಾತಂತ್ರ್ಯ ಗಳಿಸಿದ್ದು ನಮ್ಮ ದೇಶ ಮಾತ್ರ ; ಅಹಿಂಸೆಯೊಂದೇ ಗೆಲುವಿಗೆ ಕಾರಣ, ಇತ್ಯಾದಿ, ಇತ್ಯಾದಿ ವಿಚಾರಗಳ ಪರಿಸರದಲ್ಲಿ ಬೆಳೆದ ನನಗೆ ಭಾರತ ಸ್ವಾತಂತ್ರ್ಯ ಹೋರಾಟದ ವಿಭಿನ್ನ ಧಾರೆಗಳ ಕೊಡುಗೆಯ ಅರಿವಾದುದು, ಅನೇಕ ವಿಚಾರವಂತರ ಪರಿಚಯವಾದ ಮೇಲೆ, ಅನೇಕ ಮಹತ್ತ್ವದ ಗ್ರಂಥಗಳನ್ನು ಓದಿದ ಮೇಲೆ. ಈ ನಡುವೆ, 1972ರಲ್ಲಿ ಭಾರತ ಸ್ವಾತಂತ್ರ್ಯದ ಬೆಳ್ಳಿ ವರ್ಷಾಚರಣೆಯ ಸಿದ್ಧತೆ ನಡೆಯಿತು. ನಮ್ಮ ದೊಡ್ಡಪ್ಪ ಓರ್ವ ಸ್ವಾತಂತ್ರ್ಯ ಹೋರಾಟಗಾರರು. ಬ್ರಿಟಿಷರ ಆಡಳಿತದಲ್ಲಿ ಸೆರೆವಾಸವನ್ನೂ ಅನುಭವಿಸಿದವರು. ಮಗ ಮೃತ್ಯುಶಯ್ಯೆಯಲ್ಲಿದ್ದಾಗ, ಕ್ಷಮಾಯಾಚನೆ ಪತ್ರ ಬರೆದುಕೊಟ್ಟು ಬಿಡುಗಡೆ ಆಗಬಹುದಿತ್ತು. ಹಾಗೆ ಮಾಡದ ನಿಜವಾದ ಸತ್ಯಾಗ್ರಹಿ ಅವರು. ಅವರಿಗೆ ಡಾ|| ಸೂರ್ಯನಾಥ ಕಾಮತರು ಪತ್ರ ಬರೆದು ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳನ್ನು ಬರೆದುಕೊಡುವಂತೆ ಕೇಳಿದ್ದರು. ದೊಡ್ಡ ಇತಿಹಾಸಕಾರರೂ, ಲೇಖಕರೂ ಆದ ಕಾಮತರು ಪತ್ರ ಬರೆದುದು ನಮಗೆಲ್ಲಾ ವಿಶೇಷವೆನಿಸಿತ್ತು.

ಮೂವತ್ತರ ದಶಕದಲ್ಲಿಯೇ "ವಿಶ್ವಕರ್ಣಾಟಕ" ಪತ್ರಿಕೆಯ ಪ್ರತಿನಿಧಿಯಾಗಿದ್ದ ಹಾಗೂ ಸ್ವತಃ ಲೇಖಕರೂ ಆಗಿದ್ದ ನಮ್ಮ ತಂದೆ, ನಮ್ಮ ದೊಡ್ಡಪ್ಪನವರ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ - ಆಧಾರ ನೀಡಿದಂತಹವರು. ಅವರು ನನ್ನನ್ನು ಕರೆದು, ಇನ್ನುಳಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸಂದರ್ಶಿಸಿ, ಅವರ ಸ್ಮೃತಿಗಳನ್ನು ದಾಖಲಿಸುವಂತೆ ಹೇಳಿದರು. ಅದು ನನಗೆ - ನನ್ನ ಬರವಣಿಗೆಗೆ ದೊರೆತ ಮೊದಲ 'ಅಸೈನ್ ಮೆಂಟ್'. ನಮ್ಮ ದೊಡ್ಡಪ್ಪನವರ ಜೊತೆಗೇ ಸೆರೆವಾಸ ಅನುಭವಿಸಿದ್ದ ಇಬ್ಬರು ಹಿರಿಯರನ್ನು ಕಂಡು ಎರಡು ಲೇಖನಗಳನ್ನು ಸಿದ್ಧಪಡಿಸಿದೆ. ಅವರಲ್ಲಿ ಒಬ್ಬರಿಗೆ ಬರೀ ರುಜು ಹಾಕಲು ಬರುತ್ತಿತ್ತು. ಇನ್ನೊಬ್ಬರಂತೂ ನಿರಕ್ಷರಿ. ನಮ್ಮ ದೊಡ್ಡಪ್ಪನವರ ಸ್ಮೃತಿಗಳೊಂದಿಗೆ, ಈ ಎರಡು ಬರಹಗಳನ್ನೂ ಡಾ|| ಕಾಮತರಿಗೆ ಕಳುಹಿಸಲಾಯಿತು. ಕಾಮತರು ಪತ್ರ ಬರೆದು, "ಬರಹಗಳು ಚೆನ್ನಾಗಿವೆ. ಆದರೆ ಅವುಗಳನ್ನು ಸ್ವತಃ ಆ ಸ್ವಾತಂತ್ರ್ಯ ಹೋರಾಟಗಾರರೇ ಬರೆದಂತೆ, ನಿರೂಪಣೆಯನ್ನು ಕೊಂಚ ಬದಲಿಸಿ ಮುದ್ರಿಸುತ್ತೇವೆ.", ಎಂದರು.

ಮೂರೂವರೆ ದಶಕಗಳ ನಂತರ, ಆ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆದಾಗ ಅಚ್ಚರಿ ಮೂಡುವುದು, ಇಂತಹ ಹಳ್ಳಿಯ ಜನರಲ್ಲಿ, ಓದು - ಬರಹ ಬಾರದ ಮುಗ್ಧರಲ್ಲಿ, ಸ್ವಾತಂತ್ರ್ಯದ ಬೀಜಗಳನ್ನು ಆ ಗಾಂಧೀಜಿ ಬಿತ್ತಿದ್ದಾದರೂ ಹೇಗೆ, ಎಂದೇ ?. ಇಪ್ಪತ್ತನೆಯ ಶತಮಾನದ ಪೂರ್ವಾರ್ಧದ ಐತಿಹಾಸಿಕ ದಾಖಲೆಗಳು, ಇಂತಹ ಸಾವಿರಾರು - ಲಕ್ಷಾವಧಿ ಹೋರಾಟಗಾರರನ್ನು ಪರಿಚಯಿಸುತ್ತದೆ. ನೋಡಲು ಆಕರ್ಷಕವಾಗಿರದಿದ್ದ, ತೀರ ಸಾಧಾರಣ ಕಂಠಶ್ರೀಯ ಆ ಗಾಂಧಿ, ಗುಜರಾತಿನ ಮೂಲೆಯ ಸಬರ್ಮತಿ ಆಶ್ರಮದಲ್ಲಿ ಕುಳಿತು ಕೋಟಿ ಕೋಟಿ ಭಾರತೀಯರಿಗೆ, ಪ್ರೇರಣೆ ನೀಡಿದ್ದಾದರೂ ಹೇಗೆ ?. ಇಂದಿನ ಆಧುನಿಕ ಸಂವಹನ ಮಾಧ್ಯಮಗಳಿರದ, ಆ ಕಾಲಘಟ್ಟದಲ್ಲಿ ಖಾದಿ, ಗ್ರಾಮೋದ್ಧಾರ, ಪಂಚಾಯತ್ ರಾಜ್, ಗೋರಕ್ಷಣೆ, ಸ್ತ್ರೀ ವಿಮೋಚನೆಗಳ ವಿಶಿಷ್ಟ ಯೋಜನೆಗಳನ್ನು ಪ್ರಚುರಪಡಿಸಿದ್ದಾದರೂ ಹೇಗೆ ?. ನಿಜಕ್ಕೂ ವಿಸ್ಮಯವೇ !

ದುರಂತವೆಂದರೆ ಗಾಂಧೀಜಿಯವರ ಘೋಷಿತ ಉತ್ತರಾಧಿಕಾರಿ ನೆಹರೂ ಆಗಲೀ, ನೆಹರೂ ಅವರ ಅಘೋಷಿತ ಉತ್ತರಾಧಿಕಾರಿ ಇಂದಿರಾ ಆಗಲೀ , ಅವರ ಬಾಲಬಡುಕರಾಗಲೀ, ಗಾಂಧೀ ಪ್ರಣೀತ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಆಸಕ್ತಿ ವಹಿಸಲೇ ಇಲ್ಲ. ಕಾಂಗ್ರೆಸ್ಸಿಗರು ಲೈಸೆನ್ಸ್ - ಪರ್ಮಿಟ್ಟುಗಳನ್ನು ನೀಡಿ ದುಡ್ಡು ಮಾಡುವುದು ಹೇಗೆ, ಯೋಜನೆಗಳನ್ನು ಸ್ವಲಾಭಕ್ಕೆ ಬಳಸಿಕೊಳ್ಳುವುದು ಹೇಗೆ , ಇಂತಹ ಮನುಮುರುಕ ವಿದ್ಯೆಗಳಲ್ಲಿ ಮುಳುಗಿದರು. ಭ್ರಷ್ಟಾಚಾರ, ಹಣದುಬ್ಬರ, ಬೆಲೆಯೇರಿಕೆಗಳು ಜನರನ್ನು ಕಂಗೆಡಿಸಿ ಹತಾಶೆಯತ್ತ ತಳ್ಳಿದವು. 1974ರ ಹೊತ್ತಿಗೆ ಅರಾಜಕತೆಯ ಸ್ಥಿತಿ ತಾಂಡವವಾಡುತ್ತಿತ್ತು. ರಾಜಕೀಯದಿಂದ ದೂರವುಳಿದಿದ್ದ ಜಯಪ್ರಕಾಶ ನಾರಾಯಣರಂತಹವರು, ದೇಶವನ್ನು ಉಳಿಸಲು ಪ್ರತಿಭಟನೆಯ -ಸತ್ಯಾಗ್ರಹದ ನೇತೃತ್ವ ವಹಿಸಬೇಕಾಯಿತು.

ತಮ್ಮ ಅಧಿಕಾರ ಉಳಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ಸಿದ್ಧರಾದ ಇಂದಿರಾ ಗಾಂಧಿಯವರು 1975ರಲ್ಲಿ ತುರ್ತುಪರಿಸ್ಥಿತಿ ಹೇರಿದರು. ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯಗಳ ಹರಣವಾಯಿತು. ಆ ವರ್ಷದ ಗಾಂಧೀಜಯಂತಿ ಒಂದು ವಿಶೇಷ ಸಂದೇಶ ಹೊತ್ತು ತಂದಿತು. ಆದರೆ ಆ ಸಂದೇಶವು, ಸರಕಾರದ ಕಾರ್ಯಕ್ರಮಗಳ ಭಾಗವಾಗಿ ಮೂಡಿಬಂದಿರಲಿಲ್ಲ. ಆ ದಿನಗಳಲ್ಲಿ ಗಾಂಧೀ ಜಯಂತಿ ಆಚರಿಸಿದವರು ಭೂಗತ ಕಾರ್ಯಕರ್ತರು. ಎದೆಯ ಮೇಲೆ ಧರಿಸಲು ಗಾಂಧೀ ಬಿಲ್ಲೆಗಳು, ಗೋಡೆಗಳನ್ನು ಅಲಂಕರಿಸಲು ಗಾಂಧೀ ಭಿತ್ತಿಚಿತ್ರಗಳು. ಎರಡರಲ್ಲೂ ಗಾಂಧೀ ಚಿತ್ರದ ಕೆಳಗೆ, "ಅಸತ್ಯ, ಅನ್ಯಾಯ, ದಬ್ಬಾಳಿಕೆಗಳಿಗೆ ತಲೆ ಬಾಗುವುದು ಹೇಡಿತನ", ಎನ್ನುವ ಗಾಂಧೀ ಉಕ್ತಿ. ಆದರೆ ಅಂದಿನ ಇಂದಿರಾ - ದೇವರಾಜ ಅರಸು ಅವರ ಕಾಂಗ್ರೆಸ್ ಸರಕಾರಗಳಿಗೆ ಗಾಂಧಿಯ ಚಿತ್ರ, ಗಾಂಧಿಯ ಉಕ್ತಿ, ಗಾಂಧಿಯ ನೆನಪು ಎಲ್ಲಾ ನಿಷಿದ್ಧವಾಗಿತ್ತು.

ಗಾಂಧೀ ಭಿತ್ತಿಪತ್ರ ಅಂಟಿಸುತ್ತಿದ್ದ ಹಲವಾರು ಜನರನ್ನು ಪೋಲೀಸರು ಬಂಧಿಸಿದರು. ಅಹಿಂಸೆ, ಅಹಿಂಸೆ ಎಂದ ಆ ಮಹಾಮಹಿಮನ ಚಿತ್ರ ಹಿಡಿದಿದ್ದಕ್ಕೆ ಪೋಲೀಸರು ಬಡಿದರು, ಹೊಡೆದರು, ತುಳಿದರು. ಹಲವೆಡೆ ಸತ್ಯಾಗ್ರಹಿಗಳನ್ನು ಬಂಧಿಸಿ, ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ಆಪಾದಿತರನ್ನು, ಪೋಲೀಸರು, ನ್ಯಾಯಾಧೀಶರ ಮುಂದೆ ತಂದು ನಿಲ್ಲಿಸಿದಾಗ, ನ್ಯಾಯಾಧೀಶರು ತಮ್ಮ ಕಣ್ಣು - ಕಿವಿಗಳನ್ನು ನಂಬದಾದರು. "ಏನು, ಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಕ್ರಿಮಿನಲ್ ಅಪರಾಧವಾಯಿತೇ?", ಎಂದು ಪ್ರಶ್ನಿಸಿದರು. ಇದಕ್ಕೆ ಪೊಲೀಸರು ಏನು ಹೇಳಿಯಾರು ! "ಇವರೆಲ್ಲಾ ಆರೆಸ್ಸೆಸ್ ಕಾರ್ಯಕರ್ತರು", ಎಂಬ ನೆಪ ಹೇಳಿದರು. "ಇರಬಹುದು, ಆದರೆ ಇವರು ಮಾಡಿದ ಅಪರಾಧವಾದರೂ ಏನು?" ಎಂದ ನ್ಯಾಯಾಧೀಶರ ಪ್ರಶ್ನೆಗಳಿಗೆ ಪೊಲೀಸರು ನಿರುತ್ತರರಾದರು. ನ್ಯಾಯಾಧೀಶರು ಪೊಲೀಸರಿಗೆ ಛೀಮಾರಿ ಹಾಕಿ, ಬಂಧಿತರನ್ನು ಬಿಡುಗಡೆ ಮಾಡಿದರು.

ಹಿಂದೆ ಉಪ್ಪಿನ ಸತ್ಯಾಗ್ರಹದಲ್ಲಿ, ಭಾರತ್ ಛೋಡೋ ಚಳವಳಿಯಲ್ಲಿ ಭಾಗವಹಿಸಿ, "ವಂದೇಮಾತರಂ", "ಮಹಾತ್ಮಾ ಗಾಂಧೀ ಕೀ ಜೈ', "ಬೋಲೋ ಭಾರತಮಾತಾ ಕೀ ಜೈ', ಎಂದು ಘೋಷಿಸುತ್ತಿದ್ದವರ ಮೇಲೆ ಬ್ರಿಟಿಷ್ ಪೊಲೀಸರ ಲಾಠಿ ಏಟು, ಬೂಟಿನೇಟು ಬೀಳುತ್ತಿತ್ತು. "ಸ್ವಾತಂತ್ರ್ಯ" ಬಂದ ಮೇಲೂ ಹಾಗೆ ಘೋಷಣೆ ಕೂಗಿದವರ ಮೇಲೆ, ಕಾಂಗ್ರೆಸ್ ಸರಕಾರದ ಪೊಲೀಸರ ಲಾಠಿ ಏಟು ಬಿದ್ದುದು ಬರಿಯ ವಿಸ್ಮಯದ - ವಿಷಾದ ಭಾವದ ಮಾತಲ್ಲ. ಸ್ವಾತಂತ್ರ್ಯದ ಪರಿಕಲ್ಪನೆಯನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳದೆಯೇ ರಾಜಕೀಯ ಮಾಡುವ ಪಕ್ಷಗಳನ್ನು ಬೆಂಬಲಿಸಿ ಮತ ಹಾಕುವುದರ ದುಷ್ಪರಿಣಾಮಗಳ ಅಂತಿಮ ಹಂತವಿದು.

ದೊಡ್ಡ ಗಾಂಧೀವಾದಿ ಪ್ಯಾರೇಲಾಲರು "Mahatma Gandhi : The Last Phase", ಎನ್ನುವ ಬೃಹತ್ ಗ್ರಂಥ ರಚಿಸಿದ್ದಾರೆ. ಅದನ್ನು ಗಾಂಧೀವಾದಿ ದಿ|| ಕೆ.ವಿ.ಶಂಕರೇಗೌಡರು "ಮಹಾತ್ಮಾ ಗಾಂಧಿ : ಅಂತಿಮ ಹಂತ" , ಎಂದು ಅನುವಾದಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯವು ಹೊರತಂದಿರುವ ಈ ಸಂಪುಟಗಳು ಓದಲೇಬೇಕಾದ ಅಪೂರ್ವ ಮಾಹಿತಿಗಳನ್ನು, ದಾಖಲೆಗಳನ್ನು, ಸಂಗತಿಗಳನ್ನು ಒಳಗೊಂಡಿದೆ.

"ವಿಧಾನ ಪರಿಷತ್ತು ಮತ್ತು ವಿಧಾನಸಭೆಯ ಸದಸ್ಯರನೇಕರು, "ಗಾಳಿ ಬಂದಾಗ ತೂರಿಕೋ", ಎನ್ನುವ ರೀತಿಯಲ್ಲಿ ಹಣ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ಸಿನಲ್ಲಿ ತಲೆದೋರಿರುವ ಗುಂಪುಗಾರಿಕೆ ಮತ್ತು ಮಂತ್ರಿಗಳ ದೌರ್ಬಲ್ಯ ಕಂಡ ಜನರಲ್ಲಿ ಒಂದು ಬಗೆಯ ದಂಗೆಯ ಮನೋಭಾವ ಮೂಡುತ್ತಿದೆ. ಜನರು ಬ್ರಿಟಿಷ್ ಸರಕಾರವೇ ವಾಸಿಯಾಗಿತ್ತು ಎನ್ನುತ್ತಿದ್ದಾರಲ್ಲದೆ, ಕಾಂಗ್ರೆಸ್ಸನ್ನು ಹಳಿಯುತ್ತಿದ್ದಾರೆ. ಡಿಸೆಂಬರ್ 1947ರಲ್ಲಿ, ಮತ್ತೆ ಗಾಂಧೀಜಿ ಹೇಳಿದರು, " ಕಾಂಗ್ರೆಸ್ಸಿನಂತಹ ಬೃಹತ್ ಸಂಸ್ಥೆಗಳಿಂದ ಭ್ರಷ್ಟಾಚಾರ, ಅಸತ್ಯ, ಮುಂತಾದ ಪೀಡೆಗಳನ್ನು ಉಚ್ಚಾಟಿಸದೇ ಹೋದರೆ, ನಾಲ್ಕೂ ಕಡೆಯಿಂದ ಸ್ವಾರ್ಥಿಗಳು ಕಾಂಗ್ರೆಸ್ಸನ್ನು ಮುತ್ತಿ, ಈ ಸಂಸ್ಥೆ ಧೂಳೀಪಟವಾಗುತ್ತದೆ ಮತ್ತು ಹಾಗಾದಾಗ ಒಂದು ತೊಟ್ಟು ಕಣ್ಣೀರನ್ನೂ ನಾನು ಸುರಿಸುವುದಿಲ್ಲ. ದೊಡ್ಡ ರೋಗದಿಂದ ಬಳಲುತ್ತಿರುವ ರೋಗಿಯನ್ನು ಗುಣಮಾಡಲು ಸಾಧ್ಯವಿಲ್ಲದೇ ಹೋದರೆ, ರೋಗಿ ಸಾಯುವುದು ಮೇಲು". (ಪುಟ 721)

ಈ ಪರಿಪ್ರೇಕ್ಷ್ಯದಲ್ಲಿ, ಈ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯದ ಪರಿಕಲ್ಪನೆಯ ಮೂಲದ್ರವ್ಯವು ನಮ್ಮಲ್ಲಿ ಅರ್ಥಪೂರ್ಣ ವಿಚಾರಗಳನ್ನು ಹೊಮ್ಮಿಸಲಿ, ಇತಿಹಾಸ, ಗಾಂಧೀಜಿ, ಸ್ವಾತಂತ್ರ್ಯ ಹೋರಾಟಗಾರರು ಮತ್ತೊಮ್ಮೆ ನಮ್ಮ ಮೇಲೆ ಬೆಳಕು ಚೆಲ್ಲಲಿ, ನಮ್ಮನ್ನು ಕವಿದಿರುವ ಕತ್ತಲನ್ನು ನೀಗಲಿ.