24 January 2010

ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು

ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು



ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು -
ಪ್ರಭುತ್ವ (STATE) ಎಂಬುದು ಪ್ರಧಾನವಾಗಿ ರಾಜಕಾರಣ ಆಧಾರಿತವಾದುದು :
---------------------------------------------------------------------
ಅಮೆರಿಕಾ (USA) ದಲ್ಲಿ ಚೀನಾ ದೇಶದ ರಾಯಭಾರಿಯಾಗಿದ್ದ ’ಹುಶೀ’ ಅವರು ಹೇಳಿದ ಮಾತು
ಇಲ್ಲಿ ನೆನಪಾಗುತ್ತಿದೆ ; "ಚೀನಾದ ಮೇಲೆ ಇಪ್ಪತ್ತು ಶತಮಾನಗಳ ಕಾಲ, ಸಾಂಸ್ಕೃತಿಕ
ಪ್ರಭುತ್ವವನ್ನು ಭಾರತದೇಶವು ಸ್ಥಾಪಿಸಿತ್ತು. ಚೀನಾ ದೇಶಕ್ಕೆ ಒಬ್ಬನೇ ಒಬ್ಬ
ಸೈನಿಕನನ್ನೂ ಕಳುಹಿಸದೆಯೇ ಅಂತಹ ಪ್ರಭಾವ ಬೀರಲು ಭಾರತಕ್ಕೆ ಸಾಧ್ಯವಾಯಿತು. ನೆರೆಯ
ದೇಶಗಳ ಮೇಲೆ ತನ್ನ ಸಂಸ್ಕೃತಿಯನ್ನು ಭಾರತ ಎಂದೂ ಬಲವಂತದಿಂದ ಹೇರಲಿಲ್ಲ."
’ವಿಜಯಕರ್ನಾಟಕ’ ಪತ್ರಿಕೆಯ ’ವಾರದಾಗೆ ಒಂದು ಸರತಿ...’ ಅಂಕಣದಲ್ಲಿ (25.7.2007),
ಪತ್ರಕರ್ತ ಅನಂತ್ ಚಿನಿವಾರ ಅವರು ಬರೆದಿರುವ ಅಂಶಗಳಿಗೆ ಪೂರಕವಾಗಿ ಒಂದಿಷ್ಟು
ಮಾತುಗಳನ್ನು ಹೇಳಬಹುದು :
ಒಂದು ದೇಶದ ಗಡಿಯನ್ನು ನಿರ್ಧರಿಸುವುದು ಆ ದೇಶದ ರಾಜಕಾರಣ. ಶಾತವಾಹನರು, ಗುಪ್ತರು,
ಮೌರ್ಯರು ಭಾರತದ ಬಹು ಭಾಗ ಆಳಿರಬಹುದಾದರೂ, ರಾಜರಿಗಿಂತ ಪ್ರಧಾನವಾಗಿ ಸಂಸ್ಕೃತಿ -
ಧರ್ಮಗಳೇ ಭಾರತವನ್ನು - ಭಾರತದ ಸ್ವರೂಪವನ್ನು ನಿರ್ಧರಿಸಿವೆ. ಇಲ್ಲಿನ ಜನ ನೂರೆಂಟು
ಭಾಷೆಗಳ - ಪ್ರಾಂತಗಳ ವೈವಿಧ್ಯತೆಯ ನಡುವೆಯೇ ಕಾಶಿ, ಬದರಿ, ರಾಮೇಶ್ವರಗಳಿಗೆ, ದೇಶದ
ಎಲ್ಲ ಭಾಗಗಳಿಂದ, ಅಕ್ಷರಶಃ ಅನೇಕ ಸಾವಿರ ವರ್ಷಗಳಿಂದ ಹೋಗಿ ಬರುತ್ತಿದ್ದಾರೆ. ಈ
ರಾಷ್ಟ್ರದ ಸಾಂಸ್ಕೃತಿಕ ಗಡಿಗಳನ್ನು, ಇಲ್ಲಿನ ಜನ - ಇಲ್ಲಿನ ಪರಂಪರೆ - ಇಲ್ಲಿನ
ಧರ್ಮಗಳೇ ನಿರ್ಧರಿಸಿವೆ.
ಭಾಷಾ "ಸಮಸ್ಯೆ" ಇತ್ತೀಚಿನ "ಸೃಷ್ಟಿ". ಸಾವಿರಾರು ವರ್ಷಗಳಲ್ಲಿ ಭಾರತೀಯರಿಗೆ,
ವಿದೇಶಿ ಪ್ರವಾಸಿಗಳಿಗೆ ಅದೊಂದು ಸಮಸ್ಯೆಯಾಗಿ ಕಾಡಿಲ್ಲ. ಇಲ್ಲಿನ ತಕ್ಷಶಿಲೆ - ನಳಂದ
ವಿಶ್ವವಿದ್ಯಾಲಯಗಳಲ್ಲಿ ಓದಲು ಬರುತ್ತಿದ್ದ ಸಾವಿರಾರು ವಿದೇಶೀ ವಿದ್ಯಾರ್ಥಿಗಳಿಗೂ
ಭಾಷೆ ಸಮಸ್ಯೆಯಾಗಿ ಕಾಡಲಿಲ್ಲ. ಇಂದು ನಮ್ಮದೇ ದೇಶದ ಹಿಂದಿ - ಕನ್ನಡ - ತಮಿಳು
ಭಾಷೆಗಳನ್ನು ನಾವೇ ಸಮಸ್ಯೆಯಾಗಿ ಮಾಡಿಕೊಳ್ಳುತ್ತಿದ್ದೇವೆ. ಇದೀಗ ರಾಷ್ಟ್ರಪತಿಯಾಗಿ
ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಪ್ರತಿಭಾ ಪಾಟೀಲ್, ಮರಾಠಿಯಲ್ಲೋ
- ಹಿಂದಿಯಲ್ಲೋ ಪ್ರಮಾಣವಚನ ಸ್ವೀಕರಿಸಬಹುದಿತ್ತು. 1996 ರಲ್ಲಿ ಪ್ರಧಾನಮಂತ್ರಿಯಾಗಿ
ಪ್ರಮಾಣವಚನ ಸ್ವೀಕರಿಸಿದ, ನಮ್ಮಂತಹ ಕನ್ನಡಿಗರ ಕಣ್ಮಣಿ, ಸನ್ಮಾನ್ಯ ದೇವೇಗೌಡರೂ,
ಇಂಗ್ಲಿಷ್‍ನ ಬದಲು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಬಹುದಿತ್ತು. "ಸ್ವಾತಂತ್ರ್ಯ"
ಬಂದು (?) ಅರವತ್ತು ವರ್ಷಗಳಾದರೂ ನಮಗೆ ನಮ್ಮದೇ ಭಾಷೆಗಳು ಬೇಡವಾಗಿವೆ, ವಿದೇಶೀ ಭಾಷೆ
ಆಪ್ಯಾಯಮಾನವಾಗಿದೆ.
ಚಿನಿವಾರ ಅವರು "ನಮಗೆ ನಮ್ಮದೇ ಅಂತ ಹೇಳಬಹುದಾದ ಒಂದು ಕಾಮನ್ ಲಾಂಗ್ವೇಜ್ ಇಲ್ಲ.",
ಎಂದು ಬರೆದಿದ್ದಾರೆ. ಕೆಲವು ಬುದ್ಧಿಜೀವಿಗಳೂ ಆ ಮಾತನ್ನು ಆಡುವುದುಂಟು. ಕಾಮನ್
ಲಾಂಗ್ವೇಜ್ ಏಕೆ ಬೇಕು, ಎಂಬುದನ್ನು ನಾವೊಮ್ಮೆ ಯೋಚಿಸಬೇಕು. ಭಾರತದಷ್ಟು
ವಿಸ್ತೀರ್ಣ - ಗಾತ್ರಗಳ (ಮತ್ತು ವಸಾಹತು ಅಲ್ಲದ) ಯಾವ ದೇಶಕ್ಕೆ ಈ ಬಗೆಯ ಕಾಮನ್
ಲಾಂಗ್ವೇಜ್ ಇದೆ ಎಂಬುದನ್ನು ನಾವು ಪರಿಶೀಲಿಸಿ, ಈ ಮಾತನ್ನು ಆಡಬೇಕಾಗಿದೆ. ಕಾಮನ್
ಲಾಂಗ್ವೇಜ್ ಬೇಕು ಎನ್ನುವುದರ ಹಿಂದಿನ ಶಕ್ತಿಗಳು, ಎಲ್ಲ ಭಾರತೀಯ ಭಾಷೆಗಳನ್ನು ಸಾರಾ
ಸಗಟಾಗಿ ಹೂತುಹಾಕಿಬಿಡುತ್ತವೆ.
ನಾನಿಲ್ಲಿ ಬ್ರಿಟಿಷರನ್ನು - ಅವರ ಇಂಗ್ಲಿಷ್ ಭಾಷೆಯನ್ನು ಆಕ್ಷೇಪಿಸುತ್ತಿಲ್ಲ.
ತಪ್ಪು ನಮ್ಮದೇ. ನಮ್ಮಲ್ಲಿ ಒಗ್ಗಟ್ಟಿಲ್ಲ, ಸ್ವಾಭಿಮಾನವಿಲ್ಲ. ನಮ್ಮ ಅಂತಃಕಲಹ -
ನಮ್ಮ ಒಳಜಗಳಗಳು ನಮ್ಮನ್ನು ಈ ಸ್ಥಿತಿಗೆ ತಂದಿಟ್ಟಿವೆ. ನಮ್ಮಲ್ಲಿ ಎಷ್ಟು ಪ್ರತಿಭೆ
ಇದ್ದರೇನು, ಎಂತಹ ಶೌರ್ಯ ಇದ್ದರೇನು ? ಹಿಡಿಯಷ್ಟು ಜನ ಬ್ರಿಟಿಷರು ನಮ್ಮನ್ನು ನೂರಾರು
ವರ್ಷ ಆಳಿದರು, ಅವರ ಭಾಷೆ ಈಗಲೂ (ಮುಂದೆ ಸಹ) ಆಳುತ್ತಿದೆ.
ಮುರಾರಜಿ ದೇಸಾಯಿ ಅಂತಹವರೇ "We were never a nation, before British" ಎಂದರು.
ನೆಹರೂ ಅಂತಹವರ ವಿಷಯ ಮಾತನಾಡದಿರುವುದು ಒಳ್ಳೆಯದು. ಎಲ್ಲ "ವಿದ್ವಾಂಸ"ರ ಒಕ್ಕೊರಲ
ಅಭಿಪ್ರಾಯ ಒಂದೇ : "ಬ್ರಿಟಿಷರಿಗಿಂತ ಮುಂಚೆ, ಇಡೀ ಭಾರತವನ್ನು ಯಾರು ಆಳಿದ್ದಾರೆ ?"
ಎಂಬುದೇ. ಒಟ್ಟಿನಲ್ಲಿ ಒಬ್ಬ ರಾಜ - ಒಬ್ಬ ಬಾದಷಹ ಆಳಿದರೆ ಮಾತ್ರ ಅದೊಂದು ದೇಶ,
ಅದೊಂದು ರಾಷ್ಟ್ರ. ಒಂದು ದೇಶದ ಸಾಂಸ್ಕೃತಿಕ ಆಯಾಮ ನಮಗೆ ಗೌಣ. ಹಾಗೆಂದೇ,
ಭಾರತವನ್ನು "ಬುದ್ಧಿಜೀವಿ"ಗಳು, ಹಲವು ರಾಷ್ಟ್ರಗಳ ಒಂದು ಗುಂಪು ಎನ್ನುತ್ತಾರೆ, ಭಾರತ
ಒಂದು ರಾಷ್ಟ್ರವೇ ಅಲ್ಲ ಎನ್ನುವುದೂ ಉಂಟು. ಸಂವಿಧಾನ ಹೇಳುವ UNION - ಒಕ್ಕೂಟ
ಎನ್ನುವುದು ಆ ಅರ್ಥದಲ್ಲೇ ಎಂಬುದು ಕೆಲವರ ವಾದ. ಸಂವಿಧಾನಶಿಲ್ಪಿ ಡಾ|| ಅಂಬೇಡ್ಕರ್
ಅವರ ದೃಷ್ಟಿಯಲ್ಲಿ , ಅದು ರಾಜ್ಯಗಳ - ಸಂಸ್ಥಾನಗಳ ಒಕ್ಕೂಟವೇ ಹೊರತು, ರಾಷ್ಟ್ರಗಳ
ಒಕ್ಕೂಟ ಅಲ್ಲ. ಬ್ರಿಟಿಷರು "Indian Sub-Continent" ಎಂದು
ಉಲ್ಲೇಖಿಸುತ್ತಿದ್ದುದನ್ನು ನಾವೇ ಅತಿಯಾಗಿ ಮಾಡಿ, ಇದೊಂದು ರಾಷ್ಟ್ರಗಳ ಒಕ್ಕೂಟ
ಎಂದು ಅರ್ಥೈಸುವುದು, ನಮಗೆ ನಾವೇ ಮಾಡಿಕೊಳ್ಳುವ ದ್ರೋಹವಾದೀತು.
ಮೆಕಾಲೆ ಬದಲಾಯಿಸಿದ ನಮ್ಮ ಶಿಕ್ಷಣ ಕ್ರಮ, ಭಾರತೀಯರಲ್ಲಿ ಅಂತಹ ಬದಲಾವಣೆ ತಂದಿದೆ. ಈ
ಮಾತುಗಳು ಇಂಗ್ಲಿಷ್ ಭಾಷಾ ವಿರೋಧ ಧ್ವನಿಸಬಾರದು. ನಮ್ಮ ಭಾಷೆಗಳ ಗತಿ ಏನು ಎಂಬುದೇ
ಆತಂಕ ಉಂಟು ಮಾಡುತ್ತಿದೆ.
ನಮ್ಮ ಅಂತಃಕಲಹ - ನಮ್ಮ ಮೂರ್ಖತನಗಳಿಂದ ನಮ್ಮ ಗಡಿಗಳು ಒಳಗೊಳಗೇ ಸರಿಯುತ್ತಿವೆ.
ಬ್ರಿಟಿಷರು ನೇಪಾಳ, ಭೂತಾನ, ಬ್ರಹ್ಮದೇಶ (ಬರ್ಮಾ), ಶ್ರೀಲಂಕಾಗಳನ್ನು ಮುಂಚೆಯೇ ಬೇರೆ
ಮಾಡಿದರು. ಪಾಕಿಸ್ತಾನ - ಬಂಗ್ಲಾದೇಶ - ಕೈಬಿಟ್ಟುಹೋಗುತ್ತಿರುವ ಕಾಶ್ಮೀರ -
ಅರುಣಾಚಲ ಪ್ರದೇಶಗಳು, ನಮ್ಮ "ನಾಯಕ"ರ "ಸೃಷ್ಟಿ"ಗಳು.
ಭಾರತೀಯ ಪರಂಪರೆ - ಸಂಸ್ಕೃತಿಗಳ ವೈಶಿಷ್ಟ್ಯಗಳನ್ನು ರೂಢಿಸಿಕೊಂಡಿರುವ, ಮೆಚ್ಚುವ,
ಇಂಡೋನೇಷ್ಯಾ - ಕಾಂಬೋಡಿಯಾ - ಫಿಲಿಪ್ಪೈನ್ಸ್ ಅಂತಹ ದೇಶಗಳನ್ನು ನೋಡಿಯಾದರೂ ನಮ್ಮ
ಸಂಸ್ಕೃತಿಯನ್ನು ನಾವು ಗೌರವಿಸಬೇಕಾಗಿದೆ, ಉಳಿಸಿಕೊಳ್ಳಬೇಕಾಗಿದೆ. ಇಪ್ಪತ್ತನೇ
ಶತಮಾನದಲ್ಲಿ ಯೂರೋಪಿನಲ್ಲಿ "ಪ್ರಷ್ಯಾ" ಎಂಬ ದೇಶವಿತ್ತು. ಈಗ ಇಲ್ಲ. ಭಾರತ
ಹಾಗಾಗಬಾರದು. ("ಇಸ್ರೇಲ್" ಇರಲಿಲ್ಲ. ಅದನ್ನ್ನ ಸಹ ನಾವು ಮರೆಯಬಾರದು.)
ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು -
ಪ್ರಭುತ್ವ (STATE) ಎಂಬುದು ಪ್ರಧಾನವಾಗಿ ರಾಜಕಾರಣ ಆಧಾರಿತವಾದುದು, ಎಂಬುದನ್ನು
ನಾವು ಮರೆಯದಿರೋಣ.
ಮಂಜುನಾಥ ಅಜ್ಜಂಪುರ, ಬೆಂಗಳೂರು.
anmanjunath@gmail.com

ಬೀಚಿ ಕುರಿತಾದ ನನ್ನ ಅಂಕಣ

file:///F:/A.%20N.%20Manjunath%27s%20Files/My%20Documents/NAAVIKA%20Naa%20Kanda%20Prasiddharu/on%20Beechi%2023%205%202008_files/

ಎ.ಆರ್.ಕೃಷ್ಣಶಾಸ್ತ್ರಿಗಳು

ಹೊಸಗನ್ನಡ ಭಾಷೆಯನ್ನು ನಿರ್ಮಿಸಿದ, ಕಟ್ಟಿ ಬೆಳೆಸಿದ ಪ್ರಾತಃಸ್ಮರಣೀಯರಲ್ಲಿ ಅಂಬಳೆ ರಾಮಕೃಷ್ಣಶಾಸ್ತ್ರಿ ಕೃಷ್ಣಶಾಸ್ತ್ರಿಗಳು ಅಗ್ರಗಣ್ಯರು. ಕೃಷ್ಣಶಾಸ್ತ್ರಿಗಳು ಗದ್ಯರಚನಕಾರರು, ಸಂಶೋಧಕರು, ಸಂಪಾದಕರು, ನೂರಾರುಜನ ಅತ್ಯುತ್ತಮ ಶಿಷ್ಯರನ್ನು ರೂಪಿಸಿದವರು. ಮಹಾಭಾರತದಂತಹ ಅತಿದೊಡ್ಡ ಕಾವ್ಯವನ್ನು ಸಂಗ್ರಹಿಸುವುದು, ಅನುವಾದ ಮಾಡುವುದು ತುಂಬ ಕ್ಲಿಷ್ಟವಾದ ಕೆಲಸ. ಇಂದು ಅವರ ’ವಚನ ಭಾರತ’ ಕನ್ನಡದ ಗದ್ಯರೂಪದ ಮಹಾಭಾರತ ಗ್ರಂಥಗಳಲ್ಲಿ ಶ್ರೇಷ್ಠಕೃತಿಯಾಗಿ ಜನಪ್ರಿಯವಾಗಿದೆ. ಲಕ್ಷಶ್ಲೋಕಗಳ ಸಂಸ್ಕೃತದ ಮಹಾಗ್ರಂಥವನ್ನು ಪುಟ್ಟ ಹೊತ್ತಿಗೆಯಾಗಿ ರೂಪಿಸುವುದು ನಿಜಕ್ಕೂ ಕಷ್ಟ ಎನ್ನುವುದು, ಬೇರೆಯ ಮಹಾಭಾರತ ಸಾರಸಂಗ್ರಹ ಗ್ರಂಥಗಳನ್ನು ನೋಡಿದಾಗ ತಿಳಿಯುತ್ತದೆ.

ಅಂತೆಯೇ, ಸಂಸ್ಕೃತದ ಸೋಮಕವಿ ರಚಿಸಿದ ಇಪ್ಪತ್ತೆರಡು ಸಾವಿರ ಶ್ಲೋಕಗಳ ಬೃಹದ್‌ಗ್ರಂಥ ’ಕಥಾ ಸರಿತ್ಸಾಗರ’ವನ್ನೂ ಶಾಸ್ತ್ರಿಗಳು ’ಕಥಾಮೃತ’ವನ್ನಾಗಿ ಕನ್ನಡಕ್ಕೆ ನೀಡಿದರು. ಇದು ಬೇರೆಬೇರೆ ಕಥೆಗಳ ಸಂಗ್ರಹ. ಎಲ್ಲ ಕಥೆಗಳನ್ನೂ ಸೇರಿಸಿಬಿಟ್ಟರೆ, ಜನ ಕೊಳ್ಳಲಾಗದಷ್ಟು ಬೃಹತ್ ಗಾತ್ರದ್ದಾಗಿಬಿಡುತ್ತದೆ. ಕಲೆ, ವಿನ್ಯಾಸ, ಸ್ವಾರಸ್ಯಗಳನ್ನು ಕೆಡದಂತೆ ಸಂಗ್ರಹಿಸುವುದು ಹೇಗೆ ಎಂಬುದನ್ನು ಈ ’ವಚನ ಭಾರತ’, ’ಕಥಾಮೃತ’ಗಳ ಗದ್ಯಸಂಗ್ರಹಗಳಿಂದ ಅರಿಯಬಹುದು, ಕಲಿಯಬಹುದು.

ಕೃಷ್ಣಶಾಸ್ತ್ರಿಗಳು ಅಪರೂಪದ ಗುರುಗಳು, ಅವರ ಶಿಷ್ಯವಾತ್ಸಲ್ಯ, ಮಾರ್ಗದರ್ಶನಗಳು ವಿಶೇಷವಾದಂತಹವು. ಕನ್ನಡ ಭಾಷೆಯ ಸ್ವಾಭಿಮಾನ, ಅಸ್ಮಿತೆಗಳ ಸಂಕೇತವಾಗಿ ಹೋಗಿರುವ ಕುವೆಂಪು ಅವರು ಎಂ.ಎ. ಓದಲು ತತ್ತ್ವಶಾಸ್ತ್ರವನ್ನು ಆರಿಸಿಕೊಂಡುಬಿಟ್ಟಿದ್ದರು. ಆಗಷ್ಟೇ ಮೈಸೂರು ವಿಶ್ವವಿದ್ಯಾಲಯವು ಕನ್ನಡ ಎಂ.ಎ. ಪ್ರಾರಂಭಿಸಲು ನಿರ್ಧರಿಸಿತ್ತು. ಹೊಸ ಕೋರ್ಸುಗಳೆಂದರೆ ನೂರೆಂಟು ತೊಂದರೆಗಳು. ಅಂದು ನಡೆದದ್ದನ್ನು ಕುವೆಂಪು ಅವರ ಮಾತುಗಳಲ್ಲೇ ಓದಿ:

***
"ಅಧ್ಯಾಪಕರಾಗಿದ್ದ ಎ.ಆರ್.ಕೃಷ್ಣಶಾಸ್ತ್ರಿಗಳು ಕೊಠಡಿಗೆ ಹೋಗುತ್ತಿದ್ದುದನ್ನು ಕಂಡು ನಾನಿದ್ದ ವಿದ್ಯಾರ್ಥಿಗಳ ಒಂದು ಗುಂಪು ಸಶಬ್ದವಾಗಿ ನಮಸ್ಕಾರ ಮಾಡಿತು. ಅವರ ಬೆಳ್ಳನೆಯ ಕಚ್ಚೆಪಂಚೆ, ಉತ್ತರೀಯ, ಕರಿಯ ಕ್ಲೋಸ್‌ಕಾಲರ್ ಕೋಟು, ನೀಟಾಗಿ ಕಟ್ಟಿದ ಜರಿಯ ಪೇಟ, ಅವರನ್ನು ಯಾವ ಗುಂಪಿನಲ್ಲಿಯೂ ಎದ್ದು ಕಾಣುವಂತೆ ಮಾಡುತ್ತಿದ್ದವು.

ತುಸು ಹೊತ್ತಾಗುವುದರೊಳಗೆ ಮಿತ್ರರೊಬ್ಬರು ಬಂದು, "ಕೃಷ್ಣಶಾಸ್ತ್ರಿಗಳು ನಿಮ್ಮನ್ನು ಕರೆಯುತ್ತಿದ್ದಾರೆ", ಎಂದರು.
"ಏಕೆ?"
"ಏಕೋ ಗೊತ್ತಿಲ್ಲ. ಲೇಖನಗೀಖನ ಪದ್ಯಗಿದ್ಯದ ವಿಚಾರಕ್ಕಿರಬಹುದು."
ಟೀಚರ್‍ಸ್ ರೂಮಿಗೆ ಹೋದೆ, ಸಕಾತರ ಕುತೂಹಲದಿಂದಲೆ. ತಮ್ಮ ಮೇಜಿನ ಹಿಂದೆ ಕುರ್ಚಿಯ ಮೇಲೆ ಕುಳಿತಿದ್ದವರು ನಗುಮೊಗರಾಗಿ ವಿಶ್ವಾಸದಿಂದ ಸ್ವಾಗತಿಸಿದರು.
"ಈಗ ಹೇಗಿದ್ದೀರಿ, ಪುಟ್ಟಪ್ಪಾ? ಮೈ ಸರಿಯಾಗಿರಲಿಲ್ಲವೆಂದು ಕೇಳಿದೆ."
"ಹೌದು, ಸಾರ್. ಊರಿಗೆ ಹೋದಾಗ ಡಬ್ಬಲ್ ನ್ಯೂಮೋನಿಯಾ ಆಗಿ ಸ್ವಲ್ಪ ಕಷ್ಟವಾಗಿತ್ತು".
"ಎಂ.ಎ. ಗೆ ಅಪ್ಲಿಕೇಶನ್ ಹಾಕಿದಿರಾ?"
"ಹೌದು, ಹಾಕಿದ್ದೇನೆ"
"ಯಾವುದಕ್ಕೆ?"
"ಫಿಲಾಸಫಿಗೆ"
"ಈ ವರ್ಷದಿಂದ ಕನ್ನಡ ಎಂ.ಎ. ತೆರೆಯುತ್ತದೆ ಯೂನಿವರ್ಸಿಟಿ. ಸಾಕಷ್ಟು ವಿದ್ಯಾರ್ಥಿಗಳು ಬೇಕು ಅದಕ್ಕೆ. ನೀವು ಏಕೆ ಕನ್ನಡ ಎಂ.ಎ. ಗೆ ಬರಬಾರದು?"
"ಫಿಲಾಸಫಿಗೆ ಹಾಕಿದ್ದೇನೆ. ನಮ್ಮ ಪ್ರೊಫೆಸರ್, ಸೀಟು ಕೊಟ್ಟೂ ಆಗಿದೆಯಂತೆ........"
"ಫಿಲಾಸಫಿ ಏನಪ್ಪಾ? ನೀವೇ ಓದಿಕೊಳ್ಳುವ ಸಾಮರ್ಥ್ಯ ಪಡೆದಿದ್ದೀರಿ. ಹೇಗಿದ್ದರೂ ಆಶ್ರಮದಲ್ಲಿದ್ದೀರಿ. ಅಲ್ಲೇನು ಮೂರು ಹೊತ್ತೂ ಅದರ ಅಧ್ಯಯನ ತಾನೆ? ನೀವು ಎಂತಿದ್ದರೂ ಕವಿಗಳು. ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಸೇವೆ ಸಲ್ಲಿಸಬಹುದು, ಫಿಲಾಸಫಿಗಿಂತಲೂ ಕನ್ನಡಕ್ಕೆ ನಿಮ್ಮ ಅವಶ್ಯಕತೆ ಹೆಚ್ಚು."
ಸ್ವಲ್ಪ ಹಿಂದು ಮುಂದು ನೋಡಿ ಹೇಳಿದೆ, "ಆಲೋಚಿಸಿ ಆಮೇಲೆ ಹೇಳ್ತೀನಿ, ಸಾರ್"

***
"ನೋಡಿಯಪ್ಪಾ, ತುಂಬ ಪ್ರಯತ್ನದ ಪರಿಣಾಮವಾಗಿ ಕನ್ನಡ ಎಂ.ಎ. ಪ್ರಾರಂಭಿಸುತ್ತಿದ್ದೇವೆ. ನಮಗೀಗ ನಿಮ್ಮಂಥ ವಿದ್ಯಾರ್ಥಿಗಳೇ ಬೇಕಾಗಿದ್ದಾರೆ."
ಆಕರ್ಷಣೀಯ ಆಹ್ವಾನದಂತಿದ್ದ ಅವರ ಮುಗುಳುನಗೆಯ ದಾಕ್ಷಿಣ್ಯಕ್ಕೆ ವಶವಾಗುತ್ತಿದ್ದ ನಾನು ನಮಸ್ಕಾರ ಹೇಳಿ ಹೊರಗೆ ಬಂದೆ. ವಿಷಯ ಏನು ಎಂಬುದನ್ನು ಕೇಳಿ ತಿಳಿದ ಮಿತ್ರರು ನಕ್ಕುಬಿಟ್ಟರು: ಫಿಲಾಸಫಿಯಂತಹ ಅಖಿಲ ಭಾರತೀಯವೂ ಅಂತರರಾಷ್ಟ್ರೀಯವೂ ಆಗಿರುವ ಸಬ್ಜೆಕ್ಟನ್ನು ಬಿಟ್ಟು, ಪ್ರೊ. ವಾಡಿಯಾ ಅವರಂತಹ ಸುಪ್ರಸಿದ್ಧ ಪ್ರಾಧ್ಯಾಪಕರ ಕೈಕೆಳಗೆ ಅಧ್ಯಯನ ಮಾಡುವ ಗೌರವಕರವಾದ ಸುಯೋಗವನ್ನೂ ತ್ಯಜಿಸಿ, ಆಪ್ಷನಲ್ ಸಬ್ಜೆಕ್ಟಿನ ಮಟ್ಟಕ್ಕೂ ಏರದೆ ಬರಿಯ ಸೆಕೆಂಡ್ ಲಾಂಗ್ವೇಜ್ ಆಗಿರುವ ಕನ್ನಡದ ಅದರಲ್ಲಿಯೂ ಹೊಸದಾಗಿ ಪ್ರಾರಂಭಿಸಲಿರುವ ಎಂ.ಎ. ಗೆ ಸೇರುವುದೆ? ನಿನ್ನಂತಹ ಪ್ರತಿಭಾಶಾಲಿ? ಇಂಗ್ಲಿಷಿನಲ್ಲಿ ಆಗಲೇ ಕವನಗಳನ್ನು ಅಚ್ಚುಹಾಕಿಸಿರುವ, ಮುಂದೆ ಜಗತ್ ಪ್ರಸಿದ್ಧನಾಗಲಿರುವ ಕವಿ? (ಆಗಿನ್ನೂ ವಿದ್ಯಾರ್ಥಿಗಳಿಗೆ ಸೈನ್ಸ್, ಮೆಡಿಸಿನ್, ಎಂಜಿನಿಯರಿಂಗ್ ವಿಷಯಗಳು ಅಷ್ಟು ಗೌರವಭಾಜನವಾಗಿರಲಿಲ್ಲ!) ಮಿತ್ರರ ಮೂದಲಿಕೆ ನನ್ನ ಹೃದಯಕ್ಕೂ ಚುಚ್ಚಿತು. ಆದರೆ ಶ್ರೀ ಎ.ಆರ್.ಕೃಷ್ಣಶಾಸ್ತ್ರಿಗಳು ಅದಾವ ಅಮೃತ ಕ್ಷಣದಲ್ಲಿ ನನಗೆ ಶ್ರೇಯಸ್ಕರ ಸೂಚನೆ ನೀಡುವಂತೆ ಮಾಡಿತ್ತೋ ಏನೋ ವಿಧಿ? ಕನ್ನಡದ ಎಂ.ಎ ಗೆ ಸೇರಲು ನಿರ್ಧರಿಸಿದೆ!

ಎರಡು ಮೂರು ದಶಕಗಳ ತರುವಾಯ, ಮೊನ್ನೆ ಮೊನ್ನೆ, ಎ.ಆರ್.ಕೃಷ್ಣಶಾಸ್ತ್ರಿಗಳು ದಿವಂಗತರಾಗುವ ಪೂರ್ವದಲ್ಲಿ ಈ ಸಂಗತಿಯನ್ನು ಅವರಿಗೆ ತಿಳಿಸಿ, "ಜೆ.ಹೆಚ್.ಕಸಿನ್ಸ್‌ರವರು, ನಾನು ಇಂಗ್ಲಿಷಿನಲ್ಲಿ ಬರೆಯುವುದನ್ನು ಬಿಟ್ಟು ಕನ್ನಡದಲ್ಲಿ ಬರೆಯುವುದಕ್ಕೆ ಹೇಗೆ ನಿಮಿತ್ತರಾದರೋ, ತಾವೂ ಹಾಗೆಯೇ ನಾನು ಕನ್ನಡ ಎಂ.ಎ. ತೆಗೆದುಕೊಳ್ಳುವುದಕ್ಕೆ ನಿಮಿತ್ತರಾದಿರಿ," ಎಂದು ತಿಳಿಸಿದಾಗ ಶಾಸ್ತ್ರಿಗಳು ಆಶ್ಚರ್ಯಪಟ್ಟು, "ಹೌದೇ? ನನಗೆ ನೆನಪೇ ಬರುತ್ತಿಲ್ಲವಲ್ಲಾ!" ಎಂದರು. ಶ್ರೀ ಎ.ಆರ್.ಕೃಷ್ಣಶಾಸ್ತ್ರಿಗಳು ನನ್ನಂತಹ ಎಷ್ಟು ವಿದ್ಯಾರ್ಥಿಗಳಿಗೆ ಯಾವಯಾವ ರೀತಿಯಲ್ಲಿ ನೆರವಾಗಿ ಕನ್ನಡ ನವೋದಯದ ಹೊಂಬೆಳಗನ್ನು ಹೊತ್ತಿಸಿ ಉಜ್ವಲಗೊಳಿಸಿದರೋ ಅದನ್ನು ಅವರಾದರೂ ಲೆಕ್ಕವಿಟ್ಟುಕೊಳ್ಳಲಾಗಲೀ, ನೆನಪಿಟ್ಟುಕೊಳ್ಳಲಾಗಲೀ ಸಾಧ್ಯವೇ? ಅವರು ಅದನ್ನೆಲ್ಲ ಒಂದು ವಿಶೇಷಕಾರ್ಯ ಎಂಬಂತೆ ಮಾಡಿರಲಿಲ್ಲ; ಉಸಿರಾಡುವಂತೆ, ಒಂದು ಅಪ್ರಯತ್ನಪೂರ್ವಕವಾದ ಸಹಜತೆಯಿಂದ ಮಾಡಿದ್ದರು." (ಕುವೆಂಪು, "ಎ.ಆರ್.ಕೃ - ಜೀವನ ಸಾಧನೆ," ಪುಟ 2-3-4)

***
ಕುವೆಂಪು ಅವರು ಸೂಕ್ತವಾಗಿಯೇ ಹೇಳಿದ್ದಾರೆ. ಕೃಷ್ಣಶಾಸ್ತ್ರಿಗಳಿಗೆ ಕನ್ನಡವೇ ಒಂದು ನಿತ್ಯವ್ರತವಾಗಿತ್ತು. ತುಂಬ ಜನರ ಜೀವನದ ತಿರುವಿನ ಮಹಾಕ್ಷಣಗಳಲ್ಲಿ, ಇಂತಹ ಮಹಾಮಹಿಮರ ಮಾರ್ಗದರ್ಶನ, ಸಲಹೆಗಳು ತುಂಬ ಮುಖ್ಯವಾಗುತ್ತವೆ. ಕುವೆಂಪು ಅವರು ಕನ್ನಡವನ್ನು ಸ್ನಾತಕೋತ್ತರ ವಿಷಯವಾಗಿ ಆಳವಾಗಿ ಅಭ್ಯಾಸ ಮಾಡದಿದ್ದರೆ, ಪಂಪ ರನ್ನ ಜನ್ನ ನಾಗವರ್ಮ ರಾಘವಾಂಕ ಕುಮಾರವ್ಯಾಸ ಲಕ್ಷ್ಮೀಶಾದಿ ಮಹಾಕವಿ, ವರಕವಿಗಳ ಕೃತಿಗಳನ್ನು ಅಧ್ಯಯನ ಮಾಡದಿದ್ದರೆ, "ಶ್ರೀರಾಮಾಯಣ ದರ್ಶನಂ" ಮಹಾಕಾವ್ಯದಂತಹ ಮೇರುಕೃತಿಗೆ ಬೇಕಾಗುವ ಪದಸಂಪತ್ತಿಯನ್ನೂ ಮಹಾಶೈಲಿಯನ್ನೂ ಖಂಡಿತವಾಗಿಯೂ ಪಡೆಯಲಾಗುತ್ತಿರಲಿಲ್ಲ. ಕುವೆಂಪು ಅವರೇ ಮುಂದುವರಿದು, "ಬಹುಶಃ ನನ್ನ ಕಾವ್ಯಕನ್ನಿಕೆ ಬಡಕಲು ಕನ್ನಡದ ಪಂಗುಶೈಲಿಯಲ್ಲಿ ಇಂಗ್ಲಿಷಿನ ಎರವಲು ಸರಕನ್ನು ತಲೆಹೊರೆಯಲ್ಲಿ ಹೊತ್ತು ಮಾರುವ ಬೀದಿಯ ವ್ಯಾಪಾರಿಯಾಗಿರುತ್ತಿತ್ತೋ ಏನೋ?", ಎಂದಿದ್ದಾರೆ.

ಎ.ಆರ್.ಕೃಷ್ಣಶಾಸ್ತ್ರಿಗಳ ಪರೋಕ್ಷ ಸಾಧನೆಯಿರಲಿ, ಪ್ರತ್ಯಕ್ಷ ಸಾಧನೆಯೇ ಅಪಾರವಾಗಿದೆ. ಡಿವಿಜಿ, ಎಸ್.ವಿ.ಪರಮೇಶ್ವರ ಭಟ್ಟ, ಕುವೆಂಪು, ಕೆ.ವೆಂಕಟರಾಮಪ್ಪ ಮುಂತಾದ ವಿದ್ವಾಂಸರ ಗ್ರಂಥಗಳಿಗೇ ಅವರು ಮುನ್ನುಡಿ ಬರೆದಿದ್ದಾರೆ. ಅವರ ’ಬಂಕಿಮಚಂದ್ರ’, ’ನಿಬಂಧಮಾಲಾ’, ’ಭಾಸಕವಿ,’ ’ಸಂಸ್ಕೃತ ನಾಟಕ’, ಮುಂತಾದ ಅನೇಕ ಕೃತಿಗಳು, ಟಿ.ಎಸ್. ವೆಂಕಣ್ಣಯ್ಯನವರೊಂದಿಗೆ ಸಂಪಾದಿಸಿದ ’ಹರಿಶ್ಚಂದ್ರ ಕಾವ್ಯಸಂಗ್ರಹ’, ಶಾಸ್ತ್ರಿಗಳನ್ನು ಅಮರವಾಗಿಸಿವೆ. 1918ರಲ್ಲಿ ಅವರಿಂದ ಸ್ಥಾಪಿತವಾದ ಸೆಂಟ್ರಲ್ ಕಾಲೇಜು ’ಕರ್ಣಾಟಕ ಸಂಘ’, ಕನ್ನಡದ - ಕರ್ನಾಟಕದ ರೂಪುಗೊಳ್ಳುವಿಕೆಗೇ ಪ್ರೇರಣೆ ನೀಡಿತು. 1919 ರಲ್ಲಿ ಅವರು ಪ್ರಾರಂಭಿಸಿದ ’ಪ್ರಬುದ್ಧ ಕರ್ಣಾಟಕ’ ಪತ್ರಿಕೆ, ಹಲವಾರು ತಲೆಮಾರುಗಳ ಕವಿಗಳನ್ನು - ಲೇಖಕರನ್ನು ಬೆಳೆಯಿಸಿತು. ಕನ್ನಡ ದಿನಪತ್ರಿಕೆ- ವಾರಪತ್ರಿಕೆ- ಮಾಸಪತ್ರಿಕೆಗಳೇ ಬೆಳೆದಿಲ್ಲದ ಆ ಯುಗದಲ್ಲಿ, ’ಪ್ರಬುದ್ಧ ಕರ್ಣಾಟಕ’ದಲ್ಲಿ ಒಂದು ಕಥೆ, ಕವನ ಪ್ರಕಟವಾಗುವುದೆಂದರೆ, ಇಂದಿನ ಒಂದು ಸಾಹಿತ್ಯಪ್ರಶಸ್ತಿಗಿಂತ ಹೆಚ್ಚಿನದು.

***
ನಾವೆಲ್ಲ ಚಿಕ್ಕವರಿದ್ದಾಗ, ಮಹಾಭಾರತವನ್ನು ಕನ್ನಡದಲ್ಲಿ ಓದಬೇಕೆಂದರೆ ತುಂಬ ಆಯ್ಕೆಗಳೇನೂ ಇರಲಿಲ್ಲ. ಈ ’ವಚನ ಭಾರತ’ ನಮಗೆಲ್ಲ ಪ್ರಿಯವಾಗಿದ್ದು ಅದರ ಸರಳತೆಯಿಂದ, ಉತ್ಕೃಷ್ಟತೆಯಿಂದ. ಕೃಷ್ಣಶಾಸ್ತ್ರಿಗಳು ದೊಡ್ಡ ವಿದ್ವಾಂಸರು. ಅವರ ವಿದ್ವತ್‌ಪೂರ್ಣ ಕೃತಿಗಳಿಗೆ ವಿದ್ವಜ್ಜನರ ಮನ್ನಣೆಯಿದ್ದೇ ಇದೆ. ಆದರೂ ಮಕ್ಕಳಿಗೆ, ಸಾಮಾನ್ಯರಿಗೆ ’ವಚನ ಭಾರತ’ ಬಲು ಅಚ್ಚುಮೆಚ್ಚು.

’ವಚನಭಾರತ’ಕ್ಕೆ ಶಾಸ್ತ್ರಿಗಳು ವಿಸ್ತೃತ ಪೀಠಿಕೆಯೊಂದನ್ನು ಬರೆದಿದ್ದಾರೆ. ಅದೇ ಒಂದು ಪ್ರತ್ಯೇಕ ಗ್ರಂಥವೆನಿಸಿಕೊಳ್ಳುವ ಮಹತ್ತ್ವದಿಂದ ತುಂಬಿದೆ. ಅದರ ಒಂದು ಭಾಗ ಹೀಗಿದೆ, ನೋಡಿ:

"ನಾನು ಈ ಗ್ರಂಥವನ್ನು ಬರೆಯುತ್ತಿದ್ದಾಗ, ಅಂದಂದು ಬರೆದದ್ದನ್ನು ಅಂದಂದೇ, ನನ್ನ ಮಗಳು ಸೌ. ಶಾಂತಾ ಮತ್ತು ನನ್ನ ಮೊಮ್ಮಗಳು ಸೌ. ಲೀಲಾ ಇಬ್ಬರೂ ತುಂಬ ಕುತೂಹಲದಿಂದಲೂ ವಿಶ್ವಾಸದಿಂದಲೂ ಓದುತ್ತಿದ್ದರು. ಕಲ್ಯಾಣಘಟ್ಟಗಳು ಬಂದಾಗಲೂ, ಪರ್ವಗಳು ಮುಗಿದಾಗಲೂ ಮಂಗಳಪೂಜೆ ಮಾಡುತ್ತಿದ್ದರು; ಹಾಡುಹಸೆಗಳನ್ನು ಹೇಳಿ ಹಬ್ಬ ಮಾಡುತ್ತಿದ್ದರು. ಮುಗಿದಮೇಲೆ ಎಲ್ಲವನ್ನೂ ಒಟ್ಟಿಗೆ ಒಂದುಸಾರಿ ಓದಿದರು, ಸಂತೋಷಪಟ್ಟರು. ಎಲ್ಲರಿಗಿಂತ ಮುಂಚೆ ಹೀಗೆ ಹಸ್ತಪ್ರತಿಯಲ್ಲಿಯೇ ತಾವು ಓದುವಂತಾಯಿತಲ್ಲಾ ಎಂದು ಹೆಮ್ಮೆಪಟ್ಟುಕೊಂಡರು. ಅವರು ಓದುತ್ತಿದ್ದಾಗ ಅವರನ್ನು ನಾನು, "ಎಲ್ಲಿಯಾದರೂ ಬೇಸರವಾಯಿತೇ? ಎಲ್ಲಿಯಾದರೂ ಅರ್ಥವಾಗಲಿಲ್ಲವೇ?," ಎಂದು ಕೇಳುತ್ತಿದ್ದೆ. ಅದಕ್ಕೆ ’ಇಲ್ಲ’ವೆಂದು ಉತ್ತರ ಬರುತ್ತಿತ್ತು.

ನಿತ್ಯವೂ ಅದೇ ಪ್ರಶ್ನೆ, ನಿತ್ಯವೂ ಅದೇ ಉತ್ತರ. ಅದು, ನಾನು ತಂದೆ-ತಾತ ಎಂಬ ಪಕ್ಷಪಾತದಿಂದ ಹೇಳಿದ ಉತ್ತರವಲ್ಲವೆಂದು ಭಾವಿಸಿದ್ದೇನೆ. ಅವರಲ್ಲಿ ಒಬ್ಬಳು ಹೈಸ್ಕೂಲಿನ ವಿದ್ಯಾರ್ಥಿನಿ, ಇನ್ನೊಬ್ಬಳು ಕಾಲೇಜಿನ ವಿದ್ಯಾರ್ಥಿನಿ. ಆ ಮಟ್ಟದ ವಿದ್ಯಾಬುದ್ಧಿಗಳ ಜನರು ತಿಳಿಯುವಂತೆ ಸರಳವಾಗಿ, ಸಂಕೋಚಪಟ್ಟುಕೊಳ್ಳದಂತೆ ಗಂಭೀರವಾಗಿ, ಸಂಸ್ಕಾರ ಪಡೆಯುವಂತೆ ಶುದ್ಧವಾಗಿ, ಸಂತೋಷಪಡುವಂತೆ ರಸವತ್ತಾಗಿ ಬರೆಯಬೇಕೆಂಬುದೇ ನನ್ನ ಮುಖ್ಯ ಉದ್ದೇಶ." (ಪುಟ 62)

ಎ.ಆರ್.ಕೃಷ್ಣಶಾಸ್ತ್ರಿಗಳ ಈ ಸಾಲುಗಳನ್ನು ಓದುವಾಗ ಭಾರತೀಯ ಸಂಸ್ಕೃತಿಯ, ಕೌಟುಂಬಿಕ ಸಂಸ್ಕೃತಿಯ ಒಂದು ಸುಂದರ ದೃಶ್ಯ ಕಣ್ಮುಂದೆ ಸೃಷ್ಟಿಯಾಗುತ್ತದೆ. ಎ.ಆರ್.ಕೃಷ್ಣಶಾಸ್ತ್ರಿಗಳು ಹುಟ್ಟಿದ್ದು 1890 ರ ಫೆಬ್ರುವರಿ 12ರಂದು. ನಿಧನರಾದುದು 1968ರ ಫೆಬ್ರುವರಿ 1 ರಂದು. ’ವಚನ ಭಾರತ’ ಪ್ರಕಟವಾದಾಗ ಶಾಸ್ತ್ರಿಗಳಿಗೆ ಅರವತ್ತು ವರ್ಷ. ಇದೀಗ ಕನ್ನಡ ’ವಚನ ಭಾರತ’ಕ್ಕೇ ಅರವತ್ತು ವರ್ಷ.

17 November 2008

"ಅಪ್ರಿಯದರ್ಶಿನಿ" - ಇಂದಿರಾಗಾಂಧಿ



ಇಂದು ಇಂದಿರಾ ಗಾಂಧಿಯವರ ಪುಣ್ಯತಿಥಿ.  ಹಂತಕರ ಗುಂಡೇಟುಗಳಿಗೆ ಅವರು ಬಲಿಯಾಗಿ 24 ವರ್ಷಗಳಾದವು.  ಅವರ ಕೆಟ್ಟ ರಾಜಕೀಯ, ಒಡೆದಾಳುವ ರಾಜಕೀಯನೀತಿ ಅವರನ್ನೇ ಆಹುತಿ ತೆಗೆದುಕೊಂಡಿತು.    ನಾನು ದೆಹಲಿಗೆ ಹೋದಾಗಲೆಲ್ಲಾ ರಾಜಘಾಟ್ ನೋಡುವಂತೆಯೇ, ಇಂದಿರಾ ಗಾಂಧಿಯವರ ಸಮಾಧಿ "ಶಕ್ತಿಸ್ಥಳ"ವನ್ನೂ , ಸ್ಮಾರಕವಾಗಿರುವ ಅವರ ನಿವಾಸವನ್ನೂ ನೋಡುತ್ತೇನೆ.  ಅಪಾರ ಜನಪ್ರಿಯತೆ, ಖ್ಯಾತಿ ಪಡೆದ ಅವರಿಗೆ ಈ ದೇಶಕ್ಕೆ ಏನಾದರೂ ಮಾಡಬೇಕು ಎಂದು ಅನ್ನಿಸಲಿಲ್ಲವೇಕೆ, ಎಂಬುದು ತುಂಬಾ ಕಾಡುತ್ತದೆ.   ಕೋಟಿ ಕೋಟಿ ಮತಹಾಕಿ ಬೆಂಬಲಿಸಿದ ಜನರ ವಿಶ್ವಾಸ - ಪ್ರೀತಿಗಳ ಋಣವನ್ನು ತೀರಿಸಬೇಕಿತ್ತು ಎಂದು ಅವರಿಗೆ ಏಕೆ ಅನ್ನಿಸಲಿಲ್ಲ ಎಂದು ವ್ಯಥೆಯಾಗುತ್ತದೆ. 


ಕೆಲವು ಉಪಚುನಾವಣೆಗಳು ಅಪೂರ್ವ ಮಹತ್ವ ಪಡೆಯುತ್ತವೆ.  1978ರ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯು ದೇಶಾದ್ಯಂತ ರಾಜಕೀಯ ಪಲ್ಲಟವನ್ನೇ ಮಾಡಿದಂತಹ ಅಂತಹ ಮಹತ್ವದ ಚುನಾವಣೆ.  ಉತ್ತರಪ್ರದೇಶದ ತಮ್ಮ ಪರಂಪರಾಗತ ಲೋಕಸಭಾ ಕ್ಷೇತ್ರ ರಾಯಬರೇಲಿಯಲ್ಲಿ ಇಂದಿರಾ ಸೋತುಹೋಗಿದ್ದರು.  ಅಷ್ಟೇಕೆ, ದೇಶವೇ ಅವರಿಗೆ ತಿರುಗಿಬಿದ್ದಿತ್ತು.  ಅವರು ಸೋತುದು ಒಬ್ಬ ತಲೆತಿರುಕ, ವಿದೂಷಕ ಎನ್ನಬಹುದಾದ ರಾಜನಾರಾಯಣ್ ಎದುರು.  ಅದು ರಾಜನಾರಾಯಣ್ ಪರವಾದ ಮತದಾರರ ತೀರ್ಪು ಎನ್ನುವುದಕ್ಕಿಂತ, ಇಂದಿರಾ ವಿರುದ್ಧವಾದ ಪ್ರತಿಭಟನೆಯ, ಸಿಟ್ಟಿನ ಸಂಕೇತವಾಗಿತ್ತು.  ಆದರೇನು ?  ತುರ್ತಾಗಿ ಲೋಕಸಭೆಗೆ ಹೇಗಾದರೂ ಮಾಡಿ ಅವರು ಪ್ರವೇಶಿಸಬೇಕಾಗಿತ್ತು.  ಅಧಿಕಾರವಿಲ್ಲದೆ, ಎಂ.ಪಿ. ಸಹ ಅಲ್ಲ ಎನ್ನುವಂತಹ ದುಸ್ಥಿತಿಯಲ್ಲಿದ್ದ  ಇಂದಿರಾ ಚಡಪಡಿಸುತ್ತಿದ್ದರು.  1977ರ ಮಹಾಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಹಿಂದೀ ಹೃದಯಭೂಮಿಯಲ್ಲಿ ನಿರ್ನಾಮವಾಗಿದ್ದರೂ, ಕರ್ನಾಟಕ - ಆಂಧ್ರಗಳಲ್ಲಿ ಜಯಭೇರಿ ಬಾರಿಸಿತ್ತು.  ಇರುವ ಒಬ್ಬ ಎಂ.ಪಿ. ಕೈಯಲ್ಲೇ ರಾಜೀನಾಮೆ ಕೊಡಿಸಿ ಆ ಕ್ಷೇತ್ರದ ಉಪಚುನಾವಣೆಯಲ್ಲಿ ಇಂದಿರಾರನ್ನು ಲೋಕಸಭೆಗೆ ಹೇಗಾದರೂ ಕಳುಹಿಸುವ ಹುನ್ನಾರ ನಡೆದಿತ್ತು. 


ಆಗ ದಿಢೀರ್ ಪ್ರಚಾರಕ್ಕೆ ಬಂದಿದ್ದು ನಮ್ಮ ಚಿಕ್ಕಮಗಳೂರು ಕ್ಷೇತ್ರ.  1952ರ ಕಾಲದಿಂದಲೂ ಕಾಂಗ್ರೆಸ್ ಅಭ್ಯರ್ಥಿ ಆಗಿ ನಿಂತ "ಎಂತಹವರನ್ನೂ"  ಬೆಂಬಲಿಸಿದ  "ಖ್ಯಾತಿ" ಈ ಕ್ಷೇತ್ರದ್ದು.  ಚಿಕ್ಕಮಗಳೂರು ಸಂಸದ ಡಿ.ಬಿ.ಚಂದ್ರೇಗೌಡರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂದಿರಾರಿಗೆ ರತ್ನಗಂಬಳಿ ಹಾಸಿದರು.  ಅಂದಿನಿಂದಲೇ ಪ್ರಾರಂಭವಾಯಿತು ನೋಡಿ ;  ಚಿಕ್ಕಮಗಳೂರು ಕ್ಷೇತ್ರಕ್ಕೆ ಭೇಟಿ ನೀಡದ ಪತ್ರಕರ್ತರಿಲ್ಲ,  ನಾಯಕರಿಲ್ಲ.  ರಾಷ್ಟ್ರೀಯ - ಅಂತರರಾಷ್ಟ್ರೀಯ ಮಹತ್ವ ಬಂದುಬಿಟ್ಟಿತು, ಈ ಕ್ಷೇತ್ರಕ್ಕೆ ಇದ್ದಕ್ಕಿದ್ದಂತೆ.   ಆಗ ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.  ಬೇರೆಲ್ಲೆಡೆ ಸೋತ ಕಾಂಗ್ರೆಸ್,  ಕರ್ನಾಟಕದಲ್ಲಿ ಜಯಭೇರಿ ಬಾರಿಸಿದ್ದು ತಮ್ಮಿಂದಲೇ ಎಂದುಕೊಂಡುಬಿಟ್ಟರು ಅರಸು.  ಅವರು ಪೊಗರು - ಹೆಮ್ಮೆಗಳು,  ದುರಹಂಕಾರ - ಅಟ್ಟಹಾಸಗಳಾಗಿ ಮಾರ್ಪಟ್ಟವು.  ಆವರೇ, ಆ ಉಪಚುನಾವಣೆಯ ಹೊಣೆ ಹೊತ್ತುಕೊಂಡಿದ್ದರು.  ಎದುರಾಳಿ ವೀರೇಂದ್ರ ಪಾಟೀಲರು ಜನತಾ ಪಕ್ಷದ ಅಭ್ಯರ್ಥಿ.  ಆತ ಸಂಭಾವಿತ ರಾಜಕಾರಣಿ ಮತ್ತು ಮುಖ್ಯಮಂತ್ರಿ ಆಗಿ ಉತ್ತಮ ಆಡಳಿತ ನೀಡಿ ಮೆಚ್ಚುಗೆ ಗಳಿಸಿದ್ದರು.  ಸಮಾಜವಾದಿಯಾಗಿ, ಕಾರ್ಮಿಕರ - ಬಡವರ ಪರವಾದ ಹೋರಾಟ ನಡೆಸುತ್ತಿದ್ದ ಜಾರ್ಜ್ ಫರ್ನಾಂಡಿಸ್,  ಜನತಾ ಪಕ್ಷದ ಪರವಾಗಿ ಈ ಉಪಚುನಾವಣೆಯ ಹೊಣೆ ಹೊತ್ತಿದ್ದರು.  ಜಾರ್ಜ್ ಅವರ ಪರಿಶ್ರಮ - ಓಡಾಟ- ಕಳಕಳಿ ನೋಡಿ ನಮ್ಮಂತಹವರಿಗೆ ಕುತೂಹಲ, ಸಂಭ್ರಮ - ಮೆಚ್ಚುಗೆ. 

ಒಂದು ದಿನ ನಾನು ಬ್ಯಾಂಕಿನ ಕೆಲಸದ ಭರಾಟೆಯ ನಡುವೆ, ಒತ್ತಡದ ಶ್ರಮಲೋಕದಲ್ಲಿ ಮುಳುಗಿದ್ದಾಗ, ನಮ್ಮ ಅಟೆಂಡರ್ ಕೂಗಿದ.  "ಸಾರ್, ಸಾರ್, ಇಂದ್ರಾಗಾಂಧಿ ಬತ್ತಾ ಅವ್ಳೆ.....  ಬನ್ನಿ,  ಬನ್ನಿ...." .    ಸರಿ, ನಾವೆಲ್ಲಾ ಎದ್ದೆವೋ ಬಿದ್ದೆವೋ ಎನ್ನುತ್ತಾ  ಬ್ಯಾಂಕಿನ ಹೊರಬಾಗಿಲ ಬಳಿ ಧಾವಿಸಿದೆವು.  ಎದುರಿಗಿದ್ದ ದೃಶ್ಯ ನೋಡಿ, ನಾವೆಲ್ಲ ಅಕ್ಷರಶಃ ಮಾತಿಲ್ಲದಂತೆ ಮೂಕರಾಗಿಹೋದೆವು.  ಚುನಾವಣಾ ಪ್ರಚಾರದ ಒಂದು ಕಾರು,  ಅಲ್ಲಿ ಇಂದಿರಾ ಗಾಂಧಿಯವರು ನಿಂತು ಎಲ್ಲರ ಕಡೆ, ಕೈಮುಗಿಯುತ್ತಿದ್ದರು,  ಕೈ ಬೀಸುತ್ತಿದ್ದರು.  ಇಪ್ಪತ್ತು - ಇಪ್ಪತ್ತೈದು ಜನ ಮಕ್ಕಳು ಹೋ ಎಂದು ಅಸಂಬದ್ಧವಾಗಿ ಕೇಕೆ ಹಾಕುತ್ತಿದ್ದವು.  ತುಂಬ ಚಿಕ್ಕ ಊರಾದ ನಮ್ಮ ಅಜ್ಜಂಪುರದ  "ಮಹಾನ್" ನಾಯಕರೂ ಸಹ ಇಂದಿರಾ ಅವರ ಜೊತೆಗಿರಲಿಲ್ಲ.  ಮೆರವಣಿಗೆಯಲ್ಲಿ ಮುಖ್ಯಮಂತ್ರಿ ದೇವರಾಜ ಅರಸರೂ ಕಾಣಲಿಲ್ಲ.  ಹಿರಿಯರು, ನಾಯಕರು, ಮಹಿಳೆಯರು, ಯಾರೂ ಜೊತೆಗಿರಲಿಲ್ಲ.  ಅಕ್ಷರಶಃ ಇಂದಿರಾ ಪಾತಾಳಕ್ಕೆ ಇಳಿದುಬಿಟ್ಟಿದ್ದರು, ಏಕಾಂಗಿಯಾಗಿಬಿಟ್ಟಿದ್ದರು. 

ನನ್ನ ಕಣ್ಮುಂದೆ ಕ್ಷಣಾರ್ಧದಲ್ಲಿ ಚರಿತ್ರೆಯ ಪುಟಗಳು ಪಟಪಟನೆ ಹಾರಾಡಿದವು.  ಇಂದಿರಾರ ತಾತ ಮೋತೀಲಾಲ್ ನೆಹರೂ ಭಾರೀ ಶ್ರೀಮಂತ.  ಆಂತಹ ಶ್ರೀಮಂತಿಕೆಯನ್ನು ನಮ್ಮಂತಹವರು ಪುಸ್ತಕದಲ್ಲಿ ಓದಿ, ಸಿನೆಮಾದಲ್ಲಿ ನೋಡಿ ಕಲ್ಪಿಸಿಕೊಳ್ಳಬಹುದು ಅಷ್ಟೇ !  ಅಲಹಾಬಾದ್‌ನಲ್ಲಿರುವ ಆನಂದಭವನದ ವಿಶಾಲ ಆವರಣದಲ್ಲಿ ನೇಕಾರರು, ಬಣ್ಣಹಾಕುವವರು, ವಿನ್ಯಾಸ ಸಿದ್ಧಪಡಿಸುವವರು, ದರ್ಜಿಗಳು ತಿಂಗಳುಗಟ್ಟಲೆ ಇದ್ದುಕೊಂಡು ಮನೆಮಂದಿಯ ಆಸಕ್ತಿ - ಆಯ್ಕೆಗಳಿಗೆ ಅನುಗುಣವಾಗಿ ಬಟ್ಟೆಬರೆ - ವೇಷಭೂಷಣ, ಸಿದ್ಧಪಡಿಸುತ್ತಿದ್ದರಂತೆ.  ನೆಹರೂ ಮನೆಯವರು ಬಟ್ಟೆ ಖರೀದಿಗೆ ಅಂಗಡಿಗಳಿಗೆ ಎಂದೂ ಹೋದವರಲ್ಲ.  ಕಮಲಾ ನೆಹರೂ - ಇಂದಿರಾ ಮುಂತಾದ ಹೆಣ್ಣುಮಕ್ಕಳು ಯಾರೂ ರಸ್ತೆಗಳಲ್ಲಿಯೇ ನಡೆದವರಲ್ಲ.  ಅವರಿಗಾಗಿ ಸದಾ ಮೇನೆಗಳು ಸಿದ್ಧವಾಗಿರುತ್ತಿದ್ದವು.  ಬೇಸಿಗೆಯಲ್ಲಿ ಅವರ ಕುಟುಂಬ ನೈನಿತಾಲ್ - ಶಿಮ್ಲಾಗಳಂತಹ ಗಿರಿಧಾಮಗಳಲ್ಲಿ ತಿಂಗಳುಗಟ್ಟಲೆ ಇರುತ್ತಿತ್ತು.  ಇಂದಿರಾ ಅವರ ಅಜ್ಜಿ ಸ್ವರೂಪರಾಣಿಯವರು "ಪ್ರತಿವರ್ಷ ಹೋಗುವ ಈ ಗಿರಿಧಾಮಗಳಲ್ಲೆಲ್ಲಾ ಒಂದೊಂದು ಬಂಗಲೆಯನ್ನೇ ಕಟ್ಟಿಸಿಬಿಟ್ಟರೆ ಅನುಕೂಲವಾಗುತ್ತದೆ, ಬಾಡಿಗೆ ಮನೆಗಳಲ್ಲಿ - ಹೋಟೇಲುಗಳಲ್ಲಿ ಅಷ್ಟೊಂದು ಅನುಕೂಲವಿರುವುದಿಲ್ಲ", ಎಂದು ಆಕ್ಷೇಪಿಸುತ್ತಿದ್ದರಂತೆ, ಪತಿ ಮೋತೀಲಾಲರನ್ನು.  ಅವರೆಲ್ಲಾ ಇದ್ದುದೇ ಹಾಗೆ.  ರಾಜಮಹಾರಾಜರ ವಿಲಾಸ, ಶ್ರೀಮಂತಿಕೆ.    ಗಾಂಧೀಜಿ ಜೊತೆ ಸೇರಿ  "ಸೇಫ್, ಸೆಕ್ಯೂರ್ಡ್" ಎನ್ನುವಂತಹ ಅಹಿಂಸಾತ್ಮಕ ಹೋರಾಟ ನಡೆಸಿ ಜೈಲಿಗೆ ಹೋದ ತಂದೆ - ಮಗ,  ಮೋತೀಲಾಲ್ - ಜವಾಹರಲಾಲರು ಸೆರೆಮನೆಯಲ್ಲೂ ರಾಜರಂತೆಯೇ ಇದ್ದರು.  ಶ್ರೀಮಂತರನ್ನು ಅಧಿಕಾರ, ಪ್ರಸಿದ್ಧಿಗಳು ಹುಡುಕಿಕೊಂಡೇ ಬರುತ್ತವೆಯೇನೋ.  ಜವಾಹರಲಾಲರು "ಮಗಳಿಗೆ ಬರೆದ ಪತ್ರಗಳೂ"  ಪ್ರಸಿದ್ಧಿ ಪಡೆದವು.  ಜವಾಹರಲಾಲರ ಅಘೋಷಿತ ಉತ್ತರಾಧಿಕಾರಿಯಾಗಿ ಇಂದಿರಾ ತಮ್ಮ ನಲವತ್ತನೇ ವಯಸ್ಸಿಗೇ,  ಅಂದಿನ ಅವಿಭಜಿತ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆ ವಹಿಸಿಕೊಂಡಿದ್ದರು.  ತಮ್ಮ ಸರ್ವಾಧಿಕಾರಿ ಧೋರಣೆ, ಕಪಿಮುಷ್ಠಿಗಳಂತೆಯೇ  ತಮ್ಮ ಸೌಂದರ್ಯ - ಗತ್ತು -ಗಾಂಭೀರ್ಯ -ವಿಶಿಷ್ಟಶೈಲಿಗಳಿಂದಲೂ ಇಂದಿರಾ ಹೆಸರು ಮಾಡಿದ್ದರು. 

1971ರ ಬಾಂಗ್ಲಾ ವಿಜಯದ ನಂತರ ಪ್ರಧಾನಿ ಇಂದಿರಾ ಪ್ರಸಿದ್ಧಿಯ ಪರಾಕಾಷ್ಠೆ ತಲುಪಿದ್ದರು.  ಆದರೆ ಭ್ರಷ್ಟಾಚಾರ - ನಿರುದ್ಯೋಗ - ಬೆಲೆಯುಬ್ಬರಗಳನ್ನು ನಿಯಂತ್ರಿಸಲು ವಿಫಲರಾಗಿದ್ದರು.  1975ರಲ್ಲಿ, ತುರ್ತುಪರಿಸ್ಥಿತಿ ಹೇರಿ ಎಲ್ಲ ಬಗೆಯ ಸ್ವಾತಂತ್ರ್ಯಗಳನ್ನು ಹತ್ತಿಕ್ಕಿದರು.  20ಅಂಶಗಳ ಕಾರ್ಯಕ್ರಮ - ಸಂಜಯಗಾಂಧಿಯವರ 5 ಅಂಶಗಳ ಕಾರ್ಯಕ್ರಮಗಳನ್ನು ಹೇರಿ,  ಆಡಳಿತ ವ್ಯವಸ್ಥೆಯನ್ನು ತೊತ್ತಿಗಿಂತ ಕಡೆ ಎನ್ನುವಂತೆ ಮಾಡಿಬಿಟ್ಟಿದ್ದರು.  ಕಾರ್ಮಿಕರ ಹಕ್ಕುಗಳು ಮಣ್ಣು ಪಾಲಾಗಿದ್ದವು.  ಮಹಾತ್ಮಾ ಗಾಂಧಿಯವರ ಹೆಸರು ಹೇಳಿಕೊಂಡು ಅಧಿಕಾರ ಕಬಳಿಸಿದ ಕಾಂಗ್ರೆಸ್ ಪಕ್ಷವು,  ಭಟ್ಟಂಗಿಗಳ - ಗುಲಾಮರ ಸಂತೆಯಾಗಿಹೋಗಿತ್ತು.  ದೇವಕಾಂತ ಬರುವಾ ಎಂಬ ಓರ್ವ ಕಾಂಗ್ರೆಸ್ ಅಧ್ಯಕ್ಷನಂತೂ "ಇಂದಿರಾ ಈಸ್ ಇಂಡಿಯಾ, ಇಂಡಿಯಾ ಈಸ್ ಇಂದಿರಾ" ಎಂದು ಹೇಳಿ ಭಟ್ಟಂಗಿತನದ ಪರಾಕಾಷ್ಠೆ ಎಂದರೆ ಏನು ಎನ್ನುವುದನ್ನು ತೋರಿಸಿದ್ದ.  ಕೇಂದ್ರದ ಮಂತ್ರಿ - ಸಂಸದರನ್ನು ಇಂದಿರಾ ಬರಿಯ ಬೆರಳ ಸನ್ನೆಯಿಂದ ನಿರ್ದೇಶಿಸುತ್ತಿದ್ದರು - ನಿಯಂತ್ರಿಸುತ್ತಿದ್ದರು. 

ತುರ್ತುಪರಿಸ್ಥಿತಿಯ ಅಕೃತ್ಯಗಳು - ದುಷ್ಕೃತ್ಯಗಳು ಮಿತಿ ಮೀರಿ,  1977ರ ಮಹಾಚುನಾವಣೆಗಳಲ್ಲಿ  ಇಂದಿರಾ ನೆಲ ಕಚ್ಚಿದ್ದರು.  ಒಮ್ಮೆ ಬೆಂಗಳೂರಿನಿಂದ ದೆಹಲಿಗೆ ಅವರು ಪಯಣಿಸಿದಾಗ ಅಲ್ಲಿ ದೆಹಲಿಯ ವಿಮಾನನಿಲ್ದಾಣದಲ್ಲಿ,   ಸ್ವಾಗತಕ್ಕೆ ಯಾರೂ ಇರಲಿಲ್ಲ.   ಕಾರಿರಲಿ, DTC [ಸಿಟಿ] ಬಸ್ಸಿನವನೂ ನಿಲ್ಲಿಸದೆ ಹಾಗೇಹೋಗಿದ್ದ.  ಬಸ್ ನಿಲ್ದಾಣದಲ್ಲಿ ಇಂದಿರಾ ವಾಸ್ತವವಾಗಿ  ಒಬ್ಬರೇ ನಿಂತಿದ್ದರೆಂದು, " ಹಿಂದು"  ಪತ್ರಿಕೆಯಲ್ಲಿ ಓದಿ ನಾವೆಲ್ಲಾ ಚಕಿತರಾಗಿಹೋಗಿದ್ದೆವು.  ಅದೇ ಇಂದಿರಾ ನಮ್ಮೂರಿನಲ್ಲಿ ನನ್ನ ಕಣ್ಣೆದುರು ಅದೇ ಸ್ಥಿತಿಯಲ್ಲಿ ಕಾಣಿಸಿದರು.  ಹಿಂಬಾಲಕರಿಲ್ಲ, ಗುಲಾಮರಿಲ್ಲ, ಭಟ್ಟಂಗಿಗಳಿಲ್ಲ.  ಸುತ್ತ ನೋಡಿ ಅವರು ಕೈಬೀಸುತ್ತಿದ್ದಾಗ ಪ್ರತಿಯಾಗಿ ಕೈಬೀಸುವವರೂ ಇರಲಿಲ್ಲ.  ಬರೀ ಚಿಳ್ಳೆ ಪಿಳ್ಳೆ ಹುಡುಗರ ಧಾಂಧಲೆ ಮಾತ್ರ.  ಇಂದಿರಾ ಅವರ ಆಡಳಿತವನ್ನು,  ತೀರ್ಮಾನಗಳನ್ನು, ಕಾರ್ಯನೀತಿಗಳನ್ನು ತಾತ್ತ್ವಿಕವಾಗಿ ವಿರೋಧಿಸುತ್ತಿದ್ದ ನನ್ನಂತಹವರಿಗೂ ಕಸಿವಿಸಿ ಆಗುವಂತಹ ದುರ್ಧರ ಸನ್ನಿವೇಶ ಅಲ್ಲಿ ಕಂಡಿತು.  ಬಡವರ ಪರವಾಗಿ ಹಿಂದುಳಿದವರ ಪರವಾಗಿ ಮಹಿಳೆಯರ ಪರವಾಗಿ,  ನೈಜ ಕಳಕಳಿಗಿಂತ ಗಿಮಿಕ್ಸ್ - ಸ್ಟಂಟ್ಸ್ ಮಾಡುತ್ತಿದ್ದ ಇಂದಿರಾ ಇದೀಗ ಪ್ರತಿಫಲ ಪಡೆದಂತೆ ಕಾಣುತ್ತಿತ್ತು. 

ಇಂದಿರಾ ಅವರ ಪೂರ್ಣ ಹೆಸರು "ಇಂದಿರಾ ಪ್ರಿಯದರ್ಶಿನಿ" ಎಂದು, ಅವರ ಇತಿಹಾಸ,  ಅವರ ಜೀವನದ ಚಿತ್ರಗಳ ವಿಶ್ಲೇಷಣೆ ಮಾಡಿದಾಗ ಅವರು "ಅಪ್ರಿಯದರ್ಶಿನಿ"ಯಾಗಿಯೇ ಕಾಣುತ್ತಾರೆ. 

11 September 2008

ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು


ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು -
ಪ್ರಭುತ್ವ (STATE) ಎಂಬುದು ಪ್ರಧಾನವಾಗಿ ರಾಜಕಾರಣ ಆಧಾರಿತವಾದುದು :
---------------------------------------------------------------------

ಅಮೆರಿಕಾ (USA) ದಲ್ಲಿ ಚೀನಾ ದೇಶದ ರಾಯಭಾರಿಯಾಗಿದ್ದ ’ಹುಶೀ’ ಅವರು ಹೇಳಿದ ಮಾತು
ಇಲ್ಲಿ ನೆನಪಾಗುತ್ತಿದೆ ; "ಚೀನಾದ ಮೇಲೆ ಇಪ್ಪತ್ತು ಶತಮಾನಗಳ ಕಾಲ, ಸಾಂಸ್ಕೃತಿಕ
ಪ್ರಭುತ್ವವನ್ನು ಭಾರತದೇಶವು ಸ್ಥಾಪಿಸಿತ್ತು. ಚೀನಾ ದೇಶಕ್ಕೆ ಒಬ್ಬನೇ ಒಬ್ಬ
ಸೈನಿಕನನ್ನೂ ಕಳುಹಿಸದೆಯೇ ಅಂತಹ ಪ್ರಭಾವ ಬೀರಲು ಭಾರತಕ್ಕೆ ಸಾಧ್ಯವಾಯಿತು. ನೆರೆಯ
ದೇಶಗಳ ಮೇಲೆ ತನ್ನ ಸಂಸ್ಕೃತಿಯನ್ನು ಭಾರತ ಎಂದೂ ಬಲವಂತದಿಂದ ಹೇರಲಿಲ್ಲ."

’ವಿಜಯಕರ್ನಾಟಕ’ ಪತ್ರಿಕೆಯ ’ವಾರದಾಗೆ ಒಂದು ಸರತಿ...’ ಅಂಕಣದಲ್ಲಿ (25.7.2007),
ಪತ್ರಕರ್ತ ಅನಂತ್ ಚಿನಿವಾರ ಅವರು ಬರೆದಿರುವ ಅಂಶಗಳಿಗೆ ಪೂರಕವಾಗಿ ಒಂದಿಷ್ಟು
ಮಾತುಗಳನ್ನು ಹೇಳಬಹುದು :

ಒಂದು ದೇಶದ ಗಡಿಯನ್ನು ನಿರ್ಧರಿಸುವುದು ಆ ದೇಶದ ರಾಜಕಾರಣ. ಶಾತವಾಹನರು, ಗುಪ್ತರು,
ಮೌರ್ಯರು ಭಾರತದ ಬಹು ಭಾಗ ಆಳಿರಬಹುದಾದರೂ, ರಾಜರಿಗಿಂತ ಪ್ರಧಾನವಾಗಿ ಸಂಸ್ಕೃತಿ -
ಧರ್ಮಗಳೇ ಭಾರತವನ್ನು - ಭಾರತದ ಸ್ವರೂಪವನ್ನು ನಿರ್ಧರಿಸಿವೆ. ಇಲ್ಲಿನ ಜನ ನೂರೆಂಟು
ಭಾಷೆಗಳ - ಪ್ರಾಂತಗಳ ವೈವಿಧ್ಯತೆಯ ನಡುವೆಯೇ ಕಾಶಿ, ಬದರಿ, ರಾಮೇಶ್ವರಗಳಿಗೆ, ದೇಶದ
ಎಲ್ಲ ಭಾಗಗಳಿಂದ, ಅಕ್ಷರಶಃ ಅನೇಕ ಸಾವಿರ ವರ್ಷಗಳಿಂದ ಹೋಗಿ ಬರುತ್ತಿದ್ದಾರೆ. ಈ
ರಾಷ್ಟ್ರದ ಸಾಂಸ್ಕೃತಿಕ ಗಡಿಗಳನ್ನು, ಇಲ್ಲಿನ ಜನ - ಇಲ್ಲಿನ ಪರಂಪರೆ - ಇಲ್ಲಿನ
ಧರ್ಮಗಳೇ ನಿರ್ಧರಿಸಿವೆ.

ಭಾಷಾ "ಸಮಸ್ಯೆ" ಇತ್ತೀಚಿನ "ಸೃಷ್ಟಿ". ಸಾವಿರಾರು ವರ್ಷಗಳಲ್ಲಿ ಭಾರತೀಯರಿಗೆ,
ವಿದೇಶಿ ಪ್ರವಾಸಿಗಳಿಗೆ ಅದೊಂದು ಸಮಸ್ಯೆಯಾಗಿ ಕಾಡಿಲ್ಲ. ಇಲ್ಲಿನ ತಕ್ಷಶಿಲೆ - ನಳಂದ
ವಿಶ್ವವಿದ್ಯಾಲಯಗಳಲ್ಲಿ ಓದಲು ಬರುತ್ತಿದ್ದ ಸಾವಿರಾರು ವಿದೇಶೀ ವಿದ್ಯಾರ್ಥಿಗಳಿಗೂ
ಭಾಷೆ ಸಮಸ್ಯೆಯಾಗಿ ಕಾಡಲಿಲ್ಲ. ಇಂದು ನಮ್ಮದೇ ದೇಶದ ಹಿಂದಿ - ಕನ್ನಡ - ತಮಿಳು
ಭಾಷೆಗಳನ್ನು ನಾವೇ ಸಮಸ್ಯೆಯಾಗಿ ಮಾಡಿಕೊಳ್ಳುತ್ತಿದ್ದೇವೆ. ಇದೀಗ ರಾಷ್ಟ್ರಪತಿಯಾಗಿ
ಇಂಗ್ಲಿಷ್ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ಪ್ರತಿಭಾ ಪಾಟೀಲ್, ಮರಾಠಿಯಲ್ಲೋ
- ಹಿಂದಿಯಲ್ಲೋ ಪ್ರಮಾಣವಚನ ಸ್ವೀಕರಿಸಬಹುದಿತ್ತು. 1996 ರಲ್ಲಿ ಪ್ರಧಾನಮಂತ್ರಿಯಾಗಿ
ಪ್ರಮಾಣವಚನ ಸ್ವೀಕರಿಸಿದ, ನಮ್ಮಂತಹ ಕನ್ನಡಿಗರ ಕಣ್ಮಣಿ, ಸನ್ಮಾನ್ಯ ದೇವೇಗೌಡರೂ,
ಇಂಗ್ಲಿಷ್‍ನ ಬದಲು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಬಹುದಿತ್ತು. "ಸ್ವಾತಂತ್ರ್ಯ"
ಬಂದು (?) ಅರವತ್ತು ವರ್ಷಗಳಾದರೂ ನಮಗೆ ನಮ್ಮದೇ ಭಾಷೆಗಳು ಬೇಡವಾಗಿವೆ, ವಿದೇಶೀ ಭಾಷೆ
ಆಪ್ಯಾಯಮಾನವಾಗಿದೆ.

ಚಿನಿವಾರ ಅವರು "ನಮಗೆ ನಮ್ಮದೇ ಅಂತ ಹೇಳಬಹುದಾದ ಒಂದು ಕಾಮನ್ ಲಾಂಗ್ವೇಜ್ ಇಲ್ಲ.",
ಎಂದು ಬರೆದಿದ್ದಾರೆ. ಕೆಲವು ಬುದ್ಧಿಜೀವಿಗಳೂ ಆ ಮಾತನ್ನು ಆಡುವುದುಂಟು. ಕಾಮನ್
ಲಾಂಗ್ವೇಜ್ ಏಕೆ ಬೇಕು, ಎಂಬುದನ್ನು ನಾವೊಮ್ಮೆ ಯೋಚಿಸಬೇಕು. ಭಾರತದಷ್ಟು
ವಿಸ್ತೀರ್ಣ - ಗಾತ್ರಗಳ (ಮತ್ತು ವಸಾಹತು ಅಲ್ಲದ) ಯಾವ ದೇಶಕ್ಕೆ ಈ ಬಗೆಯ ಕಾಮನ್
ಲಾಂಗ್ವೇಜ್ ಇದೆ ಎಂಬುದನ್ನು ನಾವು ಪರಿಶೀಲಿಸಿ, ಈ ಮಾತನ್ನು ಆಡಬೇಕಾಗಿದೆ. ಕಾಮನ್
ಲಾಂಗ್ವೇಜ್ ಬೇಕು ಎನ್ನುವುದರ ಹಿಂದಿನ ಶಕ್ತಿಗಳು, ಎಲ್ಲ ಭಾರತೀಯ ಭಾಷೆಗಳನ್ನು ಸಾರಾ
ಸಗಟಾಗಿ ಹೂತುಹಾಕಿಬಿಡುತ್ತವೆ.

ನಾನಿಲ್ಲಿ ಬ್ರಿಟಿಷರನ್ನು - ಅವರ ಇಂಗ್ಲಿಷ್ ಭಾಷೆಯನ್ನು ಆಕ್ಷೇಪಿಸುತ್ತಿಲ್ಲ.
ತಪ್ಪು ನಮ್ಮದೇ. ನಮ್ಮಲ್ಲಿ ಒಗ್ಗಟ್ಟಿಲ್ಲ, ಸ್ವಾಭಿಮಾನವಿಲ್ಲ. ನಮ್ಮ ಅಂತಃಕಲಹ -
ನಮ್ಮ ಒಳಜಗಳಗಳು ನಮ್ಮನ್ನು ಈ ಸ್ಥಿತಿಗೆ ತಂದಿಟ್ಟಿವೆ. ನಮ್ಮಲ್ಲಿ ಎಷ್ಟು ಪ್ರತಿಭೆ
ಇದ್ದರೇನು, ಎಂತಹ ಶೌರ್ಯ ಇದ್ದರೇನು ? ಹಿಡಿಯಷ್ಟು ಜನ ಬ್ರಿಟಿಷರು ನಮ್ಮನ್ನು ನೂರಾರು
ವರ್ಷ ಆಳಿದರು, ಅವರ ಭಾಷೆ ಈಗಲೂ (ಮುಂದೆ ಸಹ) ಆಳುತ್ತಿದೆ.

ಮುರಾರಜಿ ದೇಸಾಯಿ ಅಂತಹವರೇ "We were never a nation, before British" ಎಂದರು.
ನೆಹರೂ ಅಂತಹವರ ವಿಷಯ ಮಾತನಾಡದಿರುವುದು ಒಳ್ಳೆಯದು. ಎಲ್ಲ "ವಿದ್ವಾಂಸ"ರ ಒಕ್ಕೊರಲ
ಅಭಿಪ್ರಾಯ ಒಂದೇ : "ಬ್ರಿಟಿಷರಿಗಿಂತ ಮುಂಚೆ, ಇಡೀ ಭಾರತವನ್ನು ಯಾರು ಆಳಿದ್ದಾರೆ ?"
ಎಂಬುದೇ. ಒಟ್ಟಿನಲ್ಲಿ ಒಬ್ಬ ರಾಜ - ಒಬ್ಬ ಬಾದಷಹ ಆಳಿದರೆ ಮಾತ್ರ ಅದೊಂದು ದೇಶ,
ಅದೊಂದು ರಾಷ್ಟ್ರ. ಒಂದು ದೇಶದ ಸಾಂಸ್ಕೃತಿಕ ಆಯಾಮ ನಮಗೆ ಗೌಣ. ಹಾಗೆಂದೇ,
ಭಾರತವನ್ನು "ಬುದ್ಧಿಜೀವಿ"ಗಳು, ಹಲವು ರಾಷ್ಟ್ರಗಳ ಒಂದು ಗುಂಪು ಎನ್ನುತ್ತಾರೆ, ಭಾರತ
ಒಂದು ರಾಷ್ಟ್ರವೇ ಅಲ್ಲ ಎನ್ನುವುದೂ ಉಂಟು. ಸಂವಿಧಾನ ಹೇಳುವ UNION - ಒಕ್ಕೂಟ
ಎನ್ನುವುದು ಆ ಅರ್ಥದಲ್ಲೇ ಎಂಬುದು ಕೆಲವರ ವಾದ. ಸಂವಿಧಾನಶಿಲ್ಪಿ ಡಾ|| ಅಂಬೇಡ್ಕರ್
ಅವರ ದೃಷ್ಟಿಯಲ್ಲಿ , ಅದು ರಾಜ್ಯಗಳ - ಸಂಸ್ಥಾನಗಳ ಒಕ್ಕೂಟವೇ ಹೊರತು, ರಾಷ್ಟ್ರಗಳ
ಒಕ್ಕೂಟ ಅಲ್ಲ. ಬ್ರಿಟಿಷರು "Indian Sub-Continent" ಎಂದು
ಉಲ್ಲೇಖಿಸುತ್ತಿದ್ದುದನ್ನು ನಾವೇ ಅತಿಯಾಗಿ ಮಾಡಿ, ಇದೊಂದು ರಾಷ್ಟ್ರಗಳ ಒಕ್ಕೂಟ
ಎಂದು ಅರ್ಥೈಸುವುದು, ನಮಗೆ ನಾವೇ ಮಾಡಿಕೊಳ್ಳುವ ದ್ರೋಹವಾದೀತು.

ಮೆಕಾಲೆ ಬದಲಾಯಿಸಿದ ನಮ್ಮ ಶಿಕ್ಷಣ ಕ್ರಮ, ಭಾರತೀಯರಲ್ಲಿ ಅಂತಹ ಬದಲಾವಣೆ ತಂದಿದೆ. ಈ
ಮಾತುಗಳು ಇಂಗ್ಲಿಷ್ ಭಾಷಾ ವಿರೋಧ ಧ್ವನಿಸಬಾರದು. ನಮ್ಮ ಭಾಷೆಗಳ ಗತಿ ಏನು ಎಂಬುದೇ
ಆತಂಕ ಉಂಟು ಮಾಡುತ್ತಿದೆ.

ನಮ್ಮ ಅಂತಃಕಲಹ - ನಮ್ಮ ಮೂರ್ಖತನಗಳಿಂದ ನಮ್ಮ ಗಡಿಗಳು ಒಳಗೊಳಗೇ ಸರಿಯುತ್ತಿವೆ.
ಬ್ರಿಟಿಷರು ನೇಪಾಳ, ಭೂತಾನ, ಬ್ರಹ್ಮದೇಶ (ಬರ್ಮಾ), ಶ್ರೀಲಂಕಾಗಳನ್ನು ಮುಂಚೆಯೇ ಬೇರೆ
ಮಾಡಿದರು. ಪಾಕಿಸ್ತಾನ - ಬಂಗ್ಲಾದೇಶ - ಕೈಬಿಟ್ಟುಹೋಗುತ್ತಿರುವ ಕಾಶ್ಮೀರ -
ಅರುಣಾಚಲ ಪ್ರದೇಶಗಳು, ನಮ್ಮ "ನಾಯಕ"ರ "ಸೃಷ್ಟಿ"ಗಳು.

ಭಾರತೀಯ ಪರಂಪರೆ - ಸಂಸ್ಕೃತಿಗಳ ವೈಶಿಷ್ಟ್ಯಗಳನ್ನು ರೂಢಿಸಿಕೊಂಡಿರುವ, ಮೆಚ್ಚುವ,
ಇಂಡೋನೇಷ್ಯಾ - ಕಾಂಬೋಡಿಯಾ - ಫಿಲಿಪ್ಪೈನ್ಸ್ ಅಂತಹ ದೇಶಗಳನ್ನು ನೋಡಿಯಾದರೂ ನಮ್ಮ
ಸಂಸ್ಕೃತಿಯನ್ನು ನಾವು ಗೌರವಿಸಬೇಕಾಗಿದೆ, ಉಳಿಸಿಕೊಳ್ಳಬೇಕಾಗಿದೆ. ಇಪ್ಪತ್ತನೇ
ಶತಮಾನದಲ್ಲಿ ಯೂರೋಪಿನಲ್ಲಿ "ಪ್ರಷ್ಯಾ" ಎಂಬ ದೇಶವಿತ್ತು. ಈಗ ಇಲ್ಲ. ಭಾರತ
ಹಾಗಾಗಬಾರದು. ("ಇಸ್ರೇಲ್" ಇರಲಿಲ್ಲ. ಅದನ್ನ್ನ ಸಹ ನಾವು ಮರೆಯಬಾರದು.)

ಈ ಹಿನ್ನೆಲೆಯಲ್ಲಿ, ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು -
ಪ್ರಭುತ್ವ (STATE) ಎಂಬುದು ಪ್ರಧಾನವಾಗಿ ರಾಜಕಾರಣ ಆಧಾರಿತವಾದುದು, ಎಂಬುದನ್ನು
ನಾವು ಮರೆಯದಿರೋಣ.

ಮಂಜುನಾಥ ಅಜ್ಜಂಪುರ, ಬೆಂಗಳೂರು.
anmanjunath@gmail.com

ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು

ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು
----------------------------------------

ಪುಟ್ಟದೊಂದು ಸರ್ಜರಿಯ ಕಾರಣಕ್ಕೆ, 'ಗೃಹಬಂಧನ'ದಲ್ಲಿರುವ ಈ ಅವಧಿಯಲ್ಲಿ
ಓಡಾಡುವಂತಿಲ್ಲ, ಅಲೆಯುವಂತಿಲ್ಲ. ಅಫ್ ಕೋರ್ಸ್, ಟೈಮ್ ಪಾಸ್ ಹೇಗಪ್ಪಾ ಎಂಬ ಸಮಸ್ಯೆ
ನನಗೆ ಮೊದಲಿನಿಂದಲೂ ಇಲ್ಲ. ನಾನು ಓದಲೇಬೇಕಾಗಿರುವ ಪುಸ್ತಕಗಳು, ಕೇಳಲೇಬೇಕಾಗಿರುವ
ಸಂಗೀತ, ನೋಡಲೇಬೇಕಾಗಿರುವ ಕ್ಲಾಸಿಕ್ ಸಿನೆಮಾಗಳು ಧಂಡಿಯಾಗಿರುವಾಗ, ಉಳಿದಿರುವ
ಜೀವನಪರ್ವವೇ ಸಾಲದೇನೋ ಎನ್ನುವಾಗ, ಎಷ್ಟು ಸಮಯವಿದ್ದರೂ ಸಾಲದು. ಒಂದಿಷ್ಟು ಟಿವಿ
ಹಾಕಿಕೊಂಡೆ.

ಈ ಕಿರುತೆರೆಯ ಪೆಟ್ಟಿಗೆಯಲ್ಲಿ ೭೦ - ೮೦ ವಾಹಿನಿಗಳಿವೆ. ಆದರೂ ಕೆಲವೊಮ್ಮೆ, ಈ
ವಾಹಿನಿಗಳ ಲೋಕದಲ್ಲಿ ಅದೆಷ್ಟೆಷ್ಟು ಸುತ್ತಾಡಿದರೂ, ಚಂದದ ಕಾರ್ಯಕ್ರಮವೊಂದೂ
ಸಿಕ್ಕುವುದಿಲ್ಲ. ಹಿಮೇಶ್ ರೇಶಮ್ಮಯ್ಯ - ಎ.ಆರ್.ರೆಹಮಾನ್ ಅಂತಹವರು ಹಾಡುವಾಗ, ಇವರ
ಪ್ರತಿಭೆಗಿಂತ, ಇವರಿಗೆ ಸಿಕ್ಕ - ಸಿಕ್ಕುತ್ತಿರುವ ಅವಕಾಶಗಳೇ ಜಾಸ್ತಿ
ಅನ್ನಿಸುತ್ತದೆ. ಅದಕ್ಕಿಂತ ಈ ಹಾಡುಗಳ ಅತಿಯಾದ ಪುನಃಪ್ರಸಾರ ತಲೆ ಚಿಟ್ಟು
ಹಿಡಿಸುತ್ತದೆ.

ಹಿಂದೀ ಚಿತ್ರರಂಗದ ಅದೃಷ್ಟವೋ - ಸೌಭಾಗ್ಯವೋ, ಹಿಂದೊಮ್ಮೆ ಮಹಾನ್ ಪ್ರತಿಭೆಗಳೆಲ್ಲಾ
ಒಟ್ಟುಗೂಡಿ ಮರೆಯಲಾಗದ ಮಹಾನ್ ಗೀತೆಗಳ - ಮಹಾನ್ ಸಂಗೀತದ ಸೃಷ್ಟಿಗೆ ಕಾರಣರಾದರು.
ಐವತ್ತರ - ಅರವತ್ತರ ದಶಕಗಳ ಚಿತ್ರಸಾಹಿತಿಗಳಾಗಲೀ, ಸಂಗೀತ ನಿರ್ದೇಶಕರಾಗಲೀ, ಈ
ಸೃಷ್ಟಿಯ ಉಪಕರಣಗಳಾದರು. ಮುಖೇಶ್, ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಹೇಮಂತ್
ಕುಮಾರ್, ಲತಾ ಮಂಗೇಶ್ಕರ್, ಆಶಾ ಭೋ‍ಸ್ಲೆ ಅವರೆಲ್ಲರ ಗಾಯನ ಪ್ರತಿಭೆಗೆ ಸಚಿನ್‍ದೇವ್
ಬರ್ಮನ್, ಶಂಕರ್-ಜೈಕಿಷನ್, ಮದನ್ ಮೋಹನ್, ನೌಶಾದ್, ವಸಂತ್ ದೇಸಾಯಿ, ಓ.ಪಿ.ನಯ್ಯಾರ್
ಅಂತಹ ಸಂಗೀತ ನಿರ್ದೇಶಕರಿಗೆ ದೊರೆತ ಚಿತ್ರಸಾಹಿತಿಗಳೂ ಅಂತಹ ಘಟಾನುಘಟಿಗಳೇ.
ಶೈಲೇಂದ್ರ, ಹಸರತ್ ಜೈಪುರಿ, ಭರತ್ ವ್ಯಾಸ್, ಶಕೀಲ್ ಬದಾಯುನಿ, ಮಜ್ರೂಹ್
ಸುಲ್ತಾನ್‍ಪುರಿ, ಒಬ್ಬೊಬ್ಬರ ಕೊಡುಗೆಯೂ ಅಪೂರ್ವವೇ. ಇಲ್ಲಿ ಶಾಂತಾರಾಮ್,
ರಾಜ್‍ಕಪೂರ್ ಅಂತಹ ಚಿತ್ರನಿರ್ಮಾತೃಗಳ ಕೊಡುಗೆಯೂ ಕಡಿಮೆಯದಲ್ಲ.

ಸಂಗೀತ ನಿರ್ದೇಶಕ ಎಸ್.ಡಿ.ಬರ್ಮನ್ ಅವರು ಹಾಡಿದ "ಸುನ್ ಮೇರೇ ಬಂಧೂರೇ, ಸುನ್ ಮೇರೇ
ಮಿತುವಾ", ಮತ್ತೆ ಮತ್ತೆ ಕಿವಿಗಳಲ್ಲಿ ಅನುರಣಿಸುತ್ತದೆ. ಚಿತ್ರಸಾಹಿತಿ ಆನಂದ್
ಭಕ್ಷಿ ಅನೇಕ ನೂರು ಜನಪ್ರಿಯ ಚಿತ್ರಗೀತೆ ಬರೆದಿದ್ದಾರೆ. ಅವರು "ಮೋಮ್‍ಕೀ ಗುಡಿಯಾ"
ಚಿತ್ರಕ್ಕಾಗಿ ಬರೆದು - ಹಾಡಿದ "ಬಾಗ್ಞೋ ಮೇ ಬಹಾರ್ ಆಯೀ ಹೋಟ್ಞೋಸೆ ಪುಕಾರ್ ಆಯೀ ಅಜಾ
ಆಜಾ" ಅದ್ಭುತವಾಗಿತ್ತು. ಅವರು ಲತಾ ಮಂಗೇಶ್ಕರ್ ಅವರೊಂದಿಗೆ, ಅವರ ಸರಿಸಮನಾಗಿ
ಯುಗಳಗೀತೆ ಹಾಡಿದ್ದರು. ಸಂಗೀತ ನಿರ್ದೇಶಕ ಮದನ್ ಮೋಹನ್ ಅತ್ಯುತ್ತಮ ಸಂಗೀತ
ನೀಡಿದ್ದಾರೆ. "ದಸ್ತಕ್" ಚಿತ್ರಕ್ಕಾಗಿ ಅವರೇ ಹಾಡಿ-ನಿರ್ದೇಶಿಸಿದ "ಓ ಮಾಯಿರೇ, ಮೈ
ಕ್ಞಾ ಸೆ ಕಹ್ಞೂ ಅಪನೇ ಪಿಯಾಕೀ" ಹಾಡಂತೂ ಆ ಸಿನೆಮಾದಲ್ಲಿ ಇಲ್ಲದಿದ್ದರೂ
ಜನಪ್ರಿಯವಾಗಿತ್ತು. ರೇಡಿಯೋದಲ್ಲಿ ಅದು ಪ್ರಸಾರವಾಗುವುದನ್ನು ನಾವು ಕಾದು ಕೂತು
ಕೇಳುತ್ತಿದ್ದೆವು.

ಅರವತ್ತು - ಎಪ್ಪತ್ತರ ದಶಕದಲ್ಲಿ ನಮ್ಮಲ್ಲೂ ಹೀಗೆಯೇ ಕೆಲವು ಸಂಗೀತ ನಿರ್ದೇಶಕರು,
ಹಾಗೂ ಒಂದಿಷ್ಟು ಜನ ನಟರು - ಹಾಡಿದಾಗ, ನಾವೆಲ್ಲ ತುಂಬ ಸಂಭ್ರಮ ಪಟ್ಟಿದ್ದಿದೆ.
ಜಿ.ಕೆ.ವೆಂಕಟೇಶ್ ಅವರು ಹಾಡಿದ

"ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾ, ಸೂತ್ರವ ಹರಿದಾ ಗೊಂಬೆಯ ಮುರಿದ"

"ವಿರಸವೆಂಬ ವಿಷಕೆ ಬಲಿಯಾದೆಯೇತಕೆ",

ಅಂತೆಯೇ, (ರಾಜನ್ - ನಾಗೇಂದ್ರ ಖ್ಯಾತಿಯ) ನಾಗೇಂದ್ರ ಹಾಡಿದಾಗಲೂ ವಿಶೇಷ
ಎನ್ನಿಸಿತ್ತು. ರವಿ (ಕೆ.ಎಸ್.ಎಲ್.ಸ್ವಾಮಿ) ಹಾಡಿದ

"ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು, ನಗತಾದ ಭೂತಾಯಿ ಮನಸು"

ಅಂತೂ ದಾಖಲೆಯನ್ನೇ ನಿರ್ಮಿಸಿತು. ನಟ ಆರ್.ಎನ್.ಸುದರ್ಶನ್ ಅವರು ಹಾಡಿದ "ಹೂವೊಂದು
ಬಳಿ ಬಂದು ತಾಕಿತು ಎನ್ನೆದೆಯಾ" ಇತ್ಯಾದಿ ಹಾಡುಗಳು ಗಾಯನಶೈಲಿಯ ಮೃದುತ್ವದ ವಿಶಿಷ್ಟ
ಅಭಿವ್ಯಕ್ತಿ ಎಂದೆನಿಸಿದ್ದುಂಟು. ಪುಟ್ಟಣ್ಣ ಕಣಗಾಲ್ ಅಂಥ ನಿರ್ದೇಶಕರು, ಅವರ
ಪ್ರಯೋಗಶೀಲತೆ, ಅವರು ಹೊಸ ಕಲಾವಿದರನ್ನು ಪರಿಚಯಿಸುತ್ತಿದ್ದುದು ನೆನಪಾಗುತ್ತಿದೆ.
ಅಂದಿನ ಲೋಕದ ಬಗೆಯೇ ಬೇರೆ. ಆಫ್-ಸ್ಕ್ರೀನ್ ಕಲಾವಿದರ - ಸಂಗೀತ ನಿರ್ದೇಶಕರ - ಆ
ಸಂಗೀತ ಸಾಧನಗಳ, ಮುಖ ಪರಿಚಯವೇ ಇರಲಿಲ್ಲ. ನಮ್ಮ ಕಿವಿಗಳ ಮೂಲಕವೇ ಅವರೆಲ್ಲರ
ಪರಿಚಯ. ಅಂದಿನದು ಬರಿಯ ಶ್ರವ್ಯ-ಪ್ರಪಂಚ.

ಹಾಗೆಂದೇ, ಈಗಲೂ ಹಿಮಾಲಯದ ಯಾವುದೋ ಉತ್ತುಂಗದಲ್ಲಿ, ಮಲೆನಾಡಿನ ಕಾಡಿನ
ಮೂಲೆಯೊಂದರಲ್ಲಿ, ಕಣ್ಣು ಮುಚ್ಚಿದರೆ ಸಾಕು, ಕಿವಿಯಲ್ಲಿ ರಾಗಸುಧೆ ಹರಿಯುತ್ತದೆ.
ಧ್ಯಾನ - ಮೆಡಿಟೇಶನ್ ಎಂದು ಕುಳಿತರೂ ಅದೇ ಸ್ವಪ್ನಲೋಕದ ಧಿಮಿಧಿಮಿ. ಸಂಗೀತ
ನಿರ್ದೇಶಕ ಹೇಮಂತ್ ಕುಮಾರ್ ಹಾಡಿದ "ತುಮ್ಹೇ ಯಾದ್ ಹೋಗಾ ಕಭೀ ಹಂ ಮಿಲೇಥೆ,
ಮೊಹಬ್ಬತ್ ಕೀ ರಾಹ್ಞೋ ಮೇ ಮಿಲ್ ಕೇ ಚಲೇಥೇ", "ನ ತುಮ್ ಹಮೇ ಜಾನೋ, ನ ಹಂ ತುಮ್ಹೆ
ಜಾನೇ", ಅಂತೆಯೇ ಎಸ್.ಡಿ.ಬರ್ಮನ್ ಹಾಡಿದ "ವಹ್ಞಾ ಕೌನ್ ಹೈ ತೇರಾ ಮುಸಾಫಿರ್ ಜಾಯೆಗಾ
ಕಹ್ಞಾ", "ಮೇಘ್‍ದೇ, ಪಾನಿದೇ" ನೆನಪಾದರೆ ಅಚ್ಚರಿಯಿಲ್ಲ. ಆ ಹಾಡುಗಳೇ ಹಾಗೆ. ಸ್ವತಃ
ಆ ಸಂಗೀತ ನಿರ್ದೇಶಕರಿಗೆ ತಾವೇ ಹಾಡಿಬಿಡೋಣ ಎನಿಸಿದಂಥವು ಅವು.

ಕೆಲವು ಸಂಗೀತ ನಿರ್ದೇಶಕರ - ಕಲಾವಿದರ ಗಾಯನ ಪ್ರತಿಭೆಯನ್ನು, ನಮ್ಮ ಸಿನೆಮಾ ಪ್ರಪಂಚ
ಇನ್ನಷ್ಟು ಬಳಸಿಕೊಳ್ಳಬಹುದಿತ್ತು, ಎಂದೆನಿಸುವಾಗ ವಿಸ್ಮಯದ ಭಾವ.

ಮಂಜುನಾಥ ಅಜ್ಜಂಪುರ.

anmanjunath@gmail.com

ಮಾಧ್ಯಮಗಳ ಸನ್ಮಿತ್ರರಿಗೊಂದು ಸವಿನಯ ಮನವಿ

ಮಾಧ್ಯಮಗಳ ಸನ್ಮಿತ್ರರಿಗೊಂದು ಸವಿನಯ ಮನವಿ


ಸತ್ಯಶೋಧನೆ,ಸಾರ್ವಜನಿಕ ಹಿತಾಸಕ್ತಿಗಳು ಪತ್ರಿಕೋದ್ಯಮ(ಸಮೂಹ ಮಾಧ್ಯಮ)ದ ಅಡಿಪಾಯಗಳಾಗಿದ್ದ ಕಾಲವೊಂದಿತ್ತು.ಅದು ಸತ್ಯಯುಗದ ಕಾಲ, ಇಂದಿನ ಕಲಿಯುಗಕ್ಕೆ ಹೊಂದುವುದಿಲ್ಲ ಎಂಬ ಭಾವನೆ,ಮಾಧ್ಯಮಗಳ ಇಂದಿನ ಕೆಲವು ಮಿತ್ರರಿಗೆ ಇದ್ದಂತಿದೆ.

Manjunath Ajjampuraಕನ್ನಡದ ಕೆಲವು ಸುದ್ದಿವಾಹಿನಿಗಳು, ಹಿಂದಿ /ಇಂಗ್ಲಿಷ್ ಭಾಷೆಗಳ ಕೆಲವು ವಾಹಿನಿಗಳು, ಒಂದೆರಡು ಪತ್ರಿಕೆಗಳು,ಭಯೋತ್ಪಾದಕರ ಕುಟುಂಬದವರಿಗೆ ಇದೀಗ ನೀಡುತ್ತಿರುವ ಪ್ರಚಾರ ಅಪಾಯಕಾರಿಯಾಗಿದೆ,ದೇಶದ ಹಿತಾಸಕ್ತಿಗೆ ವಿರುದ್ಧವಾಗಿದೆ. ಬಂಧಿತರ ತಾಯಿಯಾಗಲೀ, ಕುಟುಂಬದ ಉಳಿದ ಸದಸ್ಯರಾಗಲೀ, ಆಪಾದಿತರನ್ನು ಅಮಾಯಕರೆಂದೇ ಪ್ರತಿಪಾದಿಸುತ್ತಾರೆ. ಅದರಲ್ಲಿ ಆಶ್ಚರ್ಯಪಡುವಂತಹುದೇನಿಲ್ಲ. 'ನಮ್ಮ ಮಗನಿಗೆ ಭಯೋತ್ಪಾದಕರೊಂದಿಗೆ ಸಂಪರ್ಕವಿತ್ತು'ಎಂದು ಯಾರು ತಾನೇ ಹೇಳಿಯಾರು ? ಬಿಡಿ. ಪ್ರಶ್ನೆ ಅದಲ್ಲ.ಅವರಿಗೆ ಅಷ್ಟೊಂದು ಪ್ರಚಾರ ಏಕೆ ?

ನಿಜವಾಗಲೂ ವಿಸ್ಮಯ, ವಿಚಿತ್ರ ಎನಿಸುವುದು. ಈ ಕಾರಣಕ್ಕೇ.

ಜನಮಾನಸದ ಹೆಂಗರುಳು ಬೇಗ ಕರಗಿಹೋಗಿಬಿಡುತ್ತದೆ.ಯಾವುದೋ ಸುದ್ದಿಯ ತುಣುಕು, ಇನ್ನಾವುದೋ ದೃಶ್ಯ - ಶ್ರವ್ಯ (ವೀಡಿಯೋ) ತುಣುಕು, ಸಾರ್ವಜನಿಕರ ಬಹುಕಾಲದ ಮಾನಸಿಕತೆಯನ್ನೇ ಬದಲಿಸಿಬಿಡುತ್ತದೆ. ಭಯೋತ್ಪಾದಕರಿಂದ ತೊಂದರೆಗೀಡಾದ - ಹತ್ಯೆಗೀಡಾದ ಸಾರ್ವಜನಿಕರ - ಪೊಲೀಸರ ದುಃಖ ದುಮ್ಮಾನಗಳನ್ನು ತಕ್ಷಣ ಮರೆತು, ಭಯೋತ್ಪಾದಕರ ಮನೆಯವರ ಬಗೆಗೆ "ಅಯ್ಯೋ ಪಾಪ" ಎಂದುಬಿಡುತ್ತೇವೆ.ಇದು ಮಾಧ್ಯಮದ ಕೆಲವರ "ಕೊಡುಗೆ". ಅನಗತ್ಯ ವೃತ್ತಿ ಸಂಬಂಧಿತ ಸ್ಪರ್ಧೆ ಮತ್ತು ರೋಚಕತೆಗಳಿಗೆ ಶರಣಾಗುವುದರಿಂದಾಗುವ ಅಪಾಯವಿದು.

ನಕ್ಸಲೀಯರು ಶೇಷಪ್ಪಗೌಡ, ಕೆಸಮುಡಿ ವೆಂಕಟೇಶರನ್ನು, ಪೊಲೀಸರಿಗೆ ಮಾಹಿತಿ ನೀಡಿದರೆಂಬ ಕಾರಣಕ್ಕೆ ಅಮಾನುಷವಾಗಿ ಕೊಂದು ಹಾಕಿದರು.ಆ ಕುಟುಂಬಗಳ ಕಥೆಯೇನು? ಗತಿಯೇನು? ನಕ್ಸಲರನ್ನು ನಿಗ್ರಹಿಸಲು ಮೀಸಲಾಗಿ, ಊಟ - ತಿಂಡಿ- ವಿಶ್ರಾಂತಿ ಇಲ್ಲದೆ ಕಾಡು-ಮೇಡು ಅಲೆಯುತ್ತಿರುವ ಪೊಲೀಸ್ ಪೇದೆಗಳ ಗತಿಯೇನು ? ವಿಚಿತ್ರವೆಂದರೆ ಹಿಂಸೆಯನ್ನೇ ಅಸ್ತ್ರವನ್ನಾಗಿಟ್ಟುಕೊಂಡಿರುವ ನಕ್ಸಲ್ ಹುಡುಗ ಹುಡುಗಿಯರಿಗೆ, ಅವರ ಸಾವಿಗೆ ಸಿಕ್ಕುವ ಪ್ರಚಾರ,ದುರದೃಷ್ಟದಿಂದ ನಕ್ಸಲರಿಂದ ಹತ್ಯೆಗೀಡಾದ ಪೊಲೀಸರ ಕುಟುಂಬಗಳಿಗೆ -ಸಾರ್ವಜನಿಕರಿಗೆ ಸಿಕ್ಕುತ್ತಿಲ್ಲ.

ಹಿಂದೆ ವೀರಪ್ಪನ್ ಪ್ರಕರಣದಲ್ಲೂ ಹೀಗೇ ಆಗಿತ್ತು.ನೂರಾರು ಜನ ಪೊಲೀಸರನ್ನು,ಅಧಿಕಾರಿಗಳನ್ನು ಆತ ನಿರ್ದಯವಾಗಿ ಕೊಂದು ಹಾಕಿದ್ದ.ವೀರಪ್ಪನ್ ಅಂತಹವರಿಗೆ ಕ್ಷಮೆಯೇ ಇಲ್ಲ.ಆದರೆ,ವೀರಪ್ಪನ್ ಸಾವಿನ ನಂತರ,ಕೆಲವು ವಾಹಿನಿಗಳವರು, ಅವನ ಹೆಂಡತಿ ಮುತ್ತುಲಕ್ಷ್ಮಿಗೆ ಅವಳ ನೋವಿಗೆ -ಅವಳ ಆರ್ಭಟಕ್ಕೆ ವಿಪರೀತ ಪ್ರಚಾರ ನೀಡಿದರು. ಅವಳ ಮಗುವಿನ ಭವಿಷ್ಯವೇನು ಎಂಬ ಕರುಣಾರ್ದ್ರ ಪ್ರಶ್ನೆಗಳನ್ನು ವೀಕ್ಷಕರಿಗೆ ಹಾಕಲಾಯಿತು.

ಹನೀಫ್ - ಸಬೀಲ್ ಸದ್ಯಕ್ಕೆ ಆಪಾದಿತರಿರಬಹುದು, ಅಪರಾಧಿಗಳೆಂದು ಇನ್ನೂ ಸಾಧಿತವಾಗದೇ ಇರಬಹುದು. ಅವರ ಕುಟುಂಬಗಳಿಗೆ ಸಿಕ್ಕುತ್ತಿರುವ ಪ್ರಚಾರ ಅನಾರೋಗ್ಯಕರ.ಸಂಸತ್ತಿನ ಮೇಲೆ ದಾಳಿಮಾಡಿದ ಭಯೋತ್ಪಾದಕನಿಗೆ ಕ್ಷಮಾದಾನ ಸಿಕ್ಕಬೇಕೆಂದು ಕೆಲವರು ಪ್ರದರ್ಶನ ಮಾಡಿದುದು ಸಹ ಈ ಸಾಲಿಗೇ ಸೇರುವಂತಹುದು.ಅವರಿಗೆ ದೊರೆತ ಅತಿಯಾದ ಪ್ರಚಾರವೂ ಬೇಸರ ತರಿಸುವಂತಹುದು. ಸಂಸತ್ತಿನ ಮೇಲಾದ ಆ ದಾಳಿಯಲ್ಲಿ ಮಡಿದ ರಕ್ಷಣಾ ಸಿಬ್ಬಂದಿಯ ಮನೆಯವರಿಗೆ ಇನ್ನಷ್ಟು ನೋವು ತರುವುದು ಶೋಭೆ ತರುವುದಿಲ್ಲ.ನಮ್ಮನ್ನು ಉಳಿಸಲುಹೋದವರು ಅವರು.

ಮುಸ್ಲಿಮರಲ್ಲಿ ಪ್ರೊ.ಮಮ್ತಾಜ್ ಅಲಿ ಖಾನ್ ಅಂತಹವರು, ಕನ್ನಡದ ಬಗ್ಗೆ ಹೋರಾಟ ಮಾಡಿ ಜನರ ಗೌರವ ಪಡೆದಂಥವರು. ಶಾಂತಿ, ಸೌಹಾರ್ದ, ಮಾನವಹಕ್ಕುಗಳು, ಸ್ವಾಭಿಮಾನ, ಸಮಾನತೆಗಳಿಗಾಗಿ ತಮ್ಮ "ಕ್ರಶ್
(CRUSH)" ಪತ್ರಿಕೆಯ ಮೂಲಕ, ಅವರು ಮೂಢನಂಬಿಕೆಗಳ ವಿರುದ್ಧ, ಶೋಷಣೆ - ಅತ್ಯಾಚಾರ - ಅನ್ಯಾಯಗಳ ವಿರುದ್ಧ ದನಿ ಎತ್ತುತ್ತಿದ್ದಾರೆ. ಎಂತಹ ವಿರೋಧಾಭಾಸ. ಪ್ರೊ.ಮಮ್ತಾಜ್ ಅಲಿ ಖಾನ್ ಅವರಿಗಿಂತ, ಪ್ರಗತಿಪರ ಮುಸ್ಲಿಮರಿಗಿಂತ ಭಯೋತ್ಪಾದಕ ಮುಸ್ಲಿಮರ ಮನೆಯವರು ಪ್ರಚಾರ ಗಳಿಸುತ್ತಾರೆ.

ಪ್ರೀತಿಯ ಪತ್ರಕರ್ತ ಮಿತ್ರರೇ,ಪ್ಲೀಸ್ ಪ್ಲೀಸ್, ನಿಮ್ಮ ಕೆಲಸ ಆರೋಗ್ಯಕರ ಸಮಾಜವನ್ನು ಎಚ್ಚರಿಕೆಯಿಂದ ಕಟ್ಟುವುದೇ ಆಗಿರಲಿ. ನಮಸ್ಕಾರ.